ಮಾನಸ ಸರೋವರ ಯಾತ್ರಾರ್ಥಿಯ ಸಮಸ್ಯೆಗೆ ಸುಷ್ಮಾ ಸ್ಪಂದನೆ
ಹೊಸದಿಲ್ಲಿ, ಮೇ 14: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಲು ಆಯ್ಕೆಯಾದ ದಂಪತಿಯನ್ನು ಪ್ರತ್ಯೇಕ ತಂಡದಲ್ಲಿ ಸೇರಿಸಿದ ಘಟನೆ ನಡೆದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಈ ದೋಷಕ್ಕೆ ಕಂಪ್ಯೂಟರ್ ಕಾರಣ ಎಂದು ತಿಳಿಸಿದ್ದು ತಕ್ಷಣ ಈ ತಪ್ಪನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸರಕಾರ ಪ್ರತೀ ವರ್ಷ ಆಯೋಜಿಸುವ ಮಾನಸ ಸರೋವರ ಯಾತ್ರೆಗೆ ಚಂದರ್ ನಂದಿ ಮತ್ತವರ ಪತ್ನಿ ಆಯ್ಕೆಯಾಗಿದ್ದರು. ಆದರೆ ಪತಿ-ಪತ್ನಿಯನ್ನು ಪ್ರತ್ಯೇಕ ತಂಡದಲ್ಲಿ ಸೇರಿಸಲಾಗಿತ್ತು. ಈ ಸಮಸ್ಯೆಯನ್ನು ಚಂದರ್ ತಕ್ಷಣ ಸಚಿವೆ ಸ್ವರಾಜ್ ಗಮನಕ್ಕೆ ತಂದಾಗ ಅವರು - ಕಂಪ್ಯೂಟರ್ ಅಪರಾಧಿ ಎಂದು ಟ್ವೀಟ್ ಮಾಡಿದ್ದಾರೆ. ಈ ಪ್ರತಿಕ್ರಿಯೆಗೆ 7,000ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ ಹಾಗೂ 1,500ಕ್ಕೂ ಹೆಚ್ಚುಬಾರಿ ರೀಟ್ವೀಟ್ ಮಾಡಲಾಗಿದೆ.
2014ರಲ್ಲಿ ವಿದೇಶ ವ್ಯವಹಾರ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಸುಷ್ಮಾ ಸ್ವರಾಜ್ ಅವರ ಟ್ವಿಟರ್‌ನಲ್ಲಿ ಪಾಸ್‌ಪೋರ್ಟ್, ವೀಸಾ ಕುರಿತಾದ ಸಮಸ್ಯೆ ಸಹಿತ ಸಾವಿರಾರು ಸಮಸ್ಯೆಗಳನ್ನು ಪ್ರಸ್ತಾವಿಸಲಾಗಿದೆ. ಸುಷ್ಮಾ ಇದಕ್ಕೆ ತಕ್ಷಣ ಸ್ಪಂದಿಸಿದ್ದಾರೆ. ತನ್ನ ಪಾಸ್‌ಪೋರ್ಟ್‌ಗೆ ಹಾನಿಯಾಗಿರುವ ಕಾರಣ ಹೊಸ ಪಾಸ್‌ಪೋರ್ಟ್ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಕಾಶ್ಮೀರದ ವಿದ್ಯಾರ್ಥಿಯೋರ್ವ ಕಳೆದ ವಾರ ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿ ವಿನಂತಿಸಿದ್ದ. ತಾನು ‘ಭಾರತ ಆಕ್ರಮಿತ ಕಾಶ್ಮೀರ’ದ ಪ್ರಜೆ ಎಂದಾತ ತಿಳಿಸಿದ್ದಕ್ಕೆ ಮರು ಟ್ವೀಟ್ ಮಾಡಿದ್ದ ಸುಷ್ಮಾ, ಇಂತಹ ಪ್ರದೇಶ ಯಾವುದೂ ಇಲ್ಲ ಎಂದಿದ್ದರು. ತಕ್ಷಣ ತನ್ನ ತಪ್ಪನ್ನು ಆತ ತಿದ್ದಿಕೊಂಡಿದ್ದ.
2016ರಲ್ಲಿ ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿದ್ದ ವ್ಯಕ್ತಿಯೋರ್ವ, ತನ್ನ ರೆಫ್ರಿಜರೇಟರ್ ಹಾಳಾಗಿದ್ದು ತಕ್ಷಣ ಅದನ್ನು ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದ. ಇದಕ್ಕೆ ಉತ್ತರಿಸಿದ್ದ ಸುಷ್ಮಾ, ಸೋದರ- ರೆಫ್ರಿಜರೇಟರ್‌ನಂತಹ ವಿಷಯದಲ್ಲಿ ನಾನು ನಿನಗೆ ಸಹಾಯ ಮಾಡಲಾರೆ. ಯಾಕೆಂದರೆ ಮನುಷ್ಯರಿಗೆ ಸಂಬಂಧಿಸಿದ ವಿಷಯದಲ್ಲಿ ನಾನು ಮಗ್ನನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದರು.