ಯುವತಿ ಕುಟುಂಬದಿಂದ ಪ್ರೇಮಿಗಳ 'ಮರ್ಯಾದಾ ಹತ್ಯೆ'
ಅಮೃತಸರ, ಮೇ 15: ಯುವ ಪ್ರೇಮಿಗಳನ್ನು ಯುವತಿಯ ಕುಟುಂಬದವರೇ ಮರ್ಯಾದಾ ಹತ್ಯೆ ಮಾಡಿದ ಪ್ರಕರಣ ಪಾಕಿಸ್ತಾನ ಗಡಿಭಾಗದ ಪಂಜಾಬ್‌ನ ತರ್ಣ್ ತರಣ್ ಜಿಲ್ಲೆಯ ಖೇಮ್ ಕರಣ್ ಎಂಬಲ್ಲಿ ನಡೆದಿದೆ.
ನಗ್ನ ಸ್ಥಿತಿಯಲ್ಲಿರುವ ಯುವಕನ ಮೃತದೇಹ, ಯುವತಿಯ ಸಂಬಂಧಿಕರ ಮನೆ ಪಕ್ಕದ ಗಟಾರದಲ್ಲಿ ಪತ್ತೆಯಾಗಿದ್ದು, ಯುವತಿಯನ್ನು ಹತ್ಯೆ ಮಾಡಿ ಟರ್ಪಲ್‌ನಲ್ಲಿ ಮುಚ್ಚಿ ಮನೆಯೊಳಗೇ ಹುದುಗಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಮೃತ ಯುವಪ್ರೇಮಿಗಳನ್ನು ಹಸನ್‌ಪ್ರೀತ್ ಸಿಂಗ್ ಮತ್ತು ರಮಣ್‌ದೀಪ್ ಕೌರ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ಯುವತಿಯ ತಂದೆ ಜಸ್ಸಾ ಸಿಂಗ್, ಮೂವರು ಸಹೋದರರಾದ ಶೇರ್ ಸಿಂಗ್, ಹರ್ಪಾಲ್ ಸಿಂಗ್ ಮತ್ತು ಬೋಹರ್ ಸಿಂಗ್, ಬೋಹರ್‌ಸಿಂಗ್‌ನ ಪುತ್ರ ಆಕಾಶ್, ಪತ್ನಿ ಮಂಜಿತ್ ಕೌರ್, ಶೇರ್ ಸಿಂಗ್‌ನ ಪುತ್ರ ರಾಣಾ, ಹರ್ಪಾಲ್ ಸಿಂಗ್‌ನ ಪತ್ನಿ ಮನ್‌ಪ್ರೀತ್ ಕೌರ್, ಬೋಹರ್ ಸಿಂಗ್ ಪುತ್ರ ಘುಲ್ಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಯುವಕನ ಮನೆ, ಯುವತಿಯ ಮನೆಯಿಂದ ಕೇವಲ 60 ಮೀಟರ್ ಅಂತರದಲ್ಲಿದೆ.
ಕಳೆದ ಮಾರ್ಚ್ ತಿಂಗಳಲ್ಲಷ್ಟೇ, ಪಂಜಾಬ್ ಹಾಗೂ ಹರ್ಯಾಣದ ಗ್ರಾಮಗಳಲ್ಲಿ ಇಂದಿಗೂ ವ್ಯಾಪಕವಾಗಿರುವ ಮರ್ಯಾದಾ ಹತ್ಯೆ ಮತ್ತು ಖಾಪ್ ಪಂಚಾಯತ್ ವಿರುದ್ಧ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್ ಕಠಿಣ ನಿಲುವು ಪ್ರಕಟಿಸಿತ್ತು.
ಮೃತ ಯುವಕನ ತಂದೆ ಪರ್ವೀಂದರ್ ಸಿಂಗ್ ಹೇಳುವ ಪ್ರಕಾರ, ರವಿವಾರ ಎಮ್ಮೆಗಳಿಗೆ ಹುಲ್ಲು ಹಾಕಲು ಹೋದ ಪುತ್ರ ವಾಪಾಸ್ಸಾಗಿಲ್ಲ. ಬಳಿಕ ಹಸನ್‌ಪ್ರೀತ್‌ನನ್ನು ಆರೋಪಿಗಳ ಮನೆಗೆ ಎಳೆದೊಯ್ಯುತ್ತಿರುವುದನ್ನು ನೋಡಿದ ಪರ್ವೀಂದರ್ ಸಹೋದರ ಮಾಹಿತಿ ನೀಡಿದ್ದರು. ಆಗಷ್ಟೇ ರಮಣ್‌ದೀಪ್ ಕೌರ್ ಮತ್ತು ಮಗನ ಸಂಬಂಧ ತಿಳಿದುಬಂದಿತ್ತು. ಪೊಲೀಸರಿಗೆ ನೀಡಿದ ದೂರಿನ ಸಂಬಂಧ ಜೆಸ್ಸಾ ಸಿಂಗ್‌ನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.
ಯುವಕನ ತಲೆಗೆ ಹಲಗೆಯಿಂದ ಹೊಡೆದು ಪ್ರಜ್ಞೆತಪ್ಪಿಸಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಅದೇ ಹಲಗೆಯಿಂದ ಯುವತಿಯ ತಲೆಗೂ ಹೊಡೆದು ಪ್ರಜ್ಞೆತಪ್ಪಿಸಿ ಬಾಯಿಗೆ ಕೀಟನಾಶಕ ತುರುಕಿ ವಿಷಪ್ರಾಶನ ಮಾಡಲಾಗಿದೆ. ಬಳಿಕ ಯುವತಿಯ ಶವವನ್ನು ಟರ್ಪಲ್‌ನಲ್ಲಿ ಮುಚ್ಚಿಟ್ಟು ಹುದುಗಿಸಿದ್ದರು. ಯುವಕನ ದೇಹವನ್ನು ಗಟಾರಕ್ಕೆ ಎಸೆದಿದ್ದರು.