ತ್ರಿಪುರ : ಬಿಜೆಪಿ- ಐಪಿಎಫ್‌ಟಿ ಸಮ್ಮಿಶ್ರ ಸರಕಾರದಲ್ಲಿ ಒಡಕು ?

Update: 2018-05-15 16:49 GMT

ಅಗರ್ತಲ, ಮೇ 15: ತ್ರಿಪುರದಲ್ಲಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಹಾಗೂ ‘ಇಂಡೀಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ’ (ಐಪಿಎಫ್‌ಟಿ) ಪಕ್ಷಗಳ ಸಮ್ಮಿಶ್ರ ಸರಕಾರದಲ್ಲಿ ವಿಭಾಗೀಯ ಸಲಹಾ ಸಮಿತಿಗಳ ಅಧ್ಯಕ್ಷರ ನೇಮಕದ ಕುರಿತು ಭಿನ್ನಾಭಿಪ್ರಾಯ ಮೂಡಿದೆ ಎಂದು ವರದಿಯಾಗಿದೆ.

  ತ್ರಿಪುರ ಬುಡಕಟ್ಟು ಸಮೂಹದ ಸ್ವಾಯತ್ತ ಜಿಲ್ಲಾ ಸಮಿತಿ(ಎಡಿಸಿ)ಯ ಹುದ್ದೆಗೆ ನೇಮಕದ ವಿಷಯ ಎರಡು ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣ ಎಂದು ತಿಳಿದುಬಂದಿದೆ. ವಿಭಾಗೀಯ ಸಲಹಾ ಸಮಿತಿಗಳ ಶೇ.60ರಷ್ಟು ಅಧ್ಯಕ್ಷ ಹುದ್ದೆ ತನಗೆ ಸಲ್ಲಬೇಕೆಂದು ಐಪಿಎಫ್‌ಟಿ ಬಯಸಿದ್ದರೆ, ಅಭ್ಯರ್ಥಿಗಳ ಸಾಮರ್ಥ್ಯದ ಆಧಾರದಲ್ಲಿ ಈ ಹುದ್ದೆಗಳನ್ನು ನೀಡಬೇಕು ಎಂದು ಬಿಜೆಪಿ ವಾದಿಸುತ್ತಿದೆ. ಈ ಮಧ್ಯೆ, ಬಿಜೆಪಿ ನಿಲುವನ್ನು ವಿರೋಧಿಸಿ ಐಪಿಎಫ್‌ಟಿ ಬೆಂಬಲಿಗರ ಒಂದು ತಂಡವು ನಡೆಸಿದ ಪ್ರತಿಭಟನೆ ಸಂದರ್ಭ ಬಿಜೆಪಿ-ಐಪಿಎಫ್‌ಟಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಐಪಿಎಫ್‌ಟಿ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.

 ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ತಂಡವೊಂದು ಸಬ್ರೂಮ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್‌ಕುಮಾರ್ ದೇವ್, ಐಪಿಎಫ್‌ಟಿ ಹಿಂಸಾತ್ಮಕ ಪ್ರತಿಭಟನೆ ಕೈಬಿಡಬೇಕೆಂದು ಎಚ್ಚರಿಸಿದ್ದಾರೆ. ಪ್ರಜೆಗಳ ರಕ್ಷಣೆಗೆ ಮೊದಲ ಆದ್ಯತೆ. ಜನತೆಯ ದೈನಂದಿನ ಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ಐಪಿಎಫ್‌ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಇದನ್ನು ಸಮರ್ಥಿಸಲಾಗದು. ಅವರ ಕಡೆಯಿಂದ ಈ ರೀತಿಯ ವರ್ತನೆ ಮುಂದುವರಿದರೆ ತನ್ನ ಸರಕಾರ ಸುಮ್ಮನಿರದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಈ ವಿಷಯದ ಕುರಿತು ಅವರು ಐಪಿಎಫ್‌ಟಿ ಮುಖಂಡ, ಸಂಪುಟದಲ್ಲಿ ಸಚಿವರಾಗಿರುವ ಎನ್.ಸಿ.ದೇಬ್ರಾಮ ಅವರೊಂದಿಗೆ ಮಾತನಾಡಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News