ಕೇರಳದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಸಂಘಟಿಸಿದ ಪ್ರಕರಣ: 18 ‘ಸಿಮಿ’ ಸದಸ್ಯರಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Update: 2018-05-15 17:51 GMT

ಕೊಚ್ಚಿ, ಮೇ 15: ಕೇರಳದಲ್ಲಿ 2007ರಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಸಂಘಟಿಸಿದ್ದ ಪ್ರಕರಣದಲ್ಲಿ ನಿಷೇಧಿತ ‘ಸಿಮಿ’ ಸಂಘಟನೆಯ ಮುಖಂಡ ಸಫ್ದರ್ ನಾಗೋರಿ ಸೇರಿದಂತೆ 18 ಸದಸ್ಯರಿಗೆ ವಿಶೇಷ ಎನ್‌ಐಎ ನ್ಯಾಯಾಲಯವು 7 ವರ್ಷದ ಕಠಿಣ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

 ಅಕ್ರಮ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ)ಯ ಸೆಕ್ಷನ್ 10ರಡಿ 1 ವರ್ಷದ ಜೈಲುಶಿಕ್ಷೆ, 38ರಡಿ 5 ವರ್ಷದ ಕಠಿಣ ಜೈಲುಶಿಕ್ಷೆ, ದುಷ್ಕೃತ್ಯಕ್ಕೆ ಪಿತೂರಿ(ಐಪಿಸಿ ಸೆಕ್ಷನ್ 120-ಬಿ) ನಡೆಸಿದ್ದಕ್ಕೆ 7 ವರ್ಷ, ಸ್ಫೋಟಕ ವಸ್ತುಗಳ ಕಾಯ್ದೆ(ಇಎಸ್‌ಎ)ಯಡಿ7 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆಯನ್ನು ಏಕಕಾಲಕ್ಕೆ ಅನುಭವಿಸುವಂತೆ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರು ಸೂಚಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ 17 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಕಳೆದ 7 ವರ್ಷಕ್ಕಿಂತಲೂ ಅಧಿಕ ಕಾಲ ನ್ಯಾಯಾಂಗ ಬಂಧನದಲ್ಲಿದ್ದ 14 ಅಪರಾಧಿಗಳಿಗೆ ನ್ಯಾಯಾಲಯ ಬಿಡುಗಡೆಯ ಅವಕಾಶ ಒದಗಿಸಿದೆ. ಕೇರಳದ ವಗಾಮೋನ್‌ನ ಥಂಗಲ್‌ಪರ ಎಂಬಲ್ಲಿ 2007ರ ಡಿಸೆಂಬರ್‌ನಲ್ಲಿ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ (ಸಿಮಿ) ಸಂಘಟನೆಯ ಸದಸ್ಯರಿಗಾಗಿ ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ಹಮ್ಮಿಕೊಂಡಿರುವ ಬಗ್ಗೆ ಕೇರಳ ಪೊಲೀಸರು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ , ಈ ಗುಪ್ತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದವರಿಗೆ ಭಾರತದಲ್ಲಿ ‘ಜಿಹಾದ್’ ನಡೆಸಲು ತರಗತಿಯ ಜೊತೆಗೆ ದೈಹಿಕ ಕಸರತ್ತು, ಗುಂಡು ಹಾರಿಸುವ ತರಬೇತಿ, ಸ್ಫೋಟಕ ಸಿಡಿಸುವ ಬಗ್ಗೆ ತರಬೇತಿ, ಮೋಟಾರ್ ಸೈಕಲ್ ಓಡಿಸುವುದು, ಹಗ್ಗ ಬಳಸಿ ಮೇಲೇರುವುದು ಮುಂತಾದ ವಿಷಯದ ಬಗ್ಗೆ ತರಬೇತಿ ನೀಡಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.

2008ರ ಜೂನ್‌ನಲ್ಲಿ ಕೇರಳದ ಮುಂಡಕಾಯಂ ಎಂಬಲ್ಲಿ ಪ್ರಕರಣ ದಾಖಲಿಸಲಾಗಿದ್ದು ಬಳಿಕ 2010ರಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಆರೋಪಿಗಳ ವಿರುದ್ಧ ಎನ್‌ಐಎ ದಾಖಲಿಸಿದ್ದ ‘ಭಾರತ ಸರಕಾರದ ವಿರುದ್ಧ ಯುದ್ಧ ಹೂಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಸಂಗ್ರಹಣೆ, ಸರಕಾರದ ವಿರುದ್ಧ ಅಸಮಾಧಾನ ಹಬ್ಬಿಸಲು ಪ್ರಯತ್ನ, ಸಮುದಾಯದ ಮಧ್ಯೆ ಹಗೆತನ ಹರಡಲು ಪ್ರಯತ್ನ’ದ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಸಫ್ದರ್ ನಾಗೊರಿ, ಸಾದುಲಿ, ಪಿ.ಎ.ಶಿಬಿಲಿ, ಮುಹಮ್ಮದ್ ಅನ್ಸಾರ್, ಅಬ್ದುಲ್ ಸತ್ತಾರ್(ಕೇರಳದವರು), ಹಫೀಝ್ ಹುಸೈನ್, ಮುಹಮ್ಮದ್ ಸಮಿ ಬಾಗೇವಾಡಿ, ನದೀಮ್ ಸಯೀದ್, ಡಾ ಎಚ್.ಎ.ಅಸಾದುಲ್ಲಾ, ಶಕೀಲ್ ಅಹ್ಮದ್, ಮಿರ್ಝಾ ಅಹ್ಮದ್ ಬೇಗ್(ಕರ್ನಾಟಕ),ಆಮಿಲ್ ಪರ್ವೇಝ್, ಕಮರುದ್ದೀನ್ ನಾಗೊರಿ(ಮಧ್ಯಪ್ರದೇಶ), ಮುಫ್ತಿ ಅಬುಲ್ ಬಶಾರ್(ಉತ್ತರಪ್ರದೇಶ),ದಾನಿಷ್ , ಮನ್‌ಝರ್ ಇಮಾಮ್(ಜಾರ್ಖಂಡ್), ಮುಹಮ್ಮದ್ ಅಬು ಫೈಸಲ್ ಖಾನ್(ಮಹಾರಾಷ್ಟ್ರ) ಮತ್ತು ಅಲಮ್ ಜೇಬ್ ಅಫ್ರಿದಿ(ಗುಜರಾತ್) ಶಿಕ್ಷೆಗೆ ಒಳಗಾದವರು. 2001ರಲ್ಲಿ ‘ಸಿಮಿ’ಯನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News