ಶುದ್ಧ ಗಂಗಾ ಯೋಜನೆಯ ಪಾಲನ ವರದಿ ಸಲ್ಲಿಸದ ಕೇಂದ್ರ ಸರಕಾರಕ್ಕೆ ಎನ್‌ಜಿಟಿ ತರಾಟೆ

Update: 2018-05-15 17:38 GMT

ಹೊಸದಿಲ್ಲಿ, ಮೇ 15: ಶುದ್ಧ ಗಂಗೆ ರಾಷ್ಟ್ರೀಯ ಯೋಜನೆಯಡಿ ಕೈಗೊಳ್ಳಲಾದ ಕ್ರಮಗಳ ಕುರಿತು ಪಾಲನ ವರದಿ ಸಲ್ಲಿಸದ ಕೇಂದ್ರ ಸರಕಾರ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಸರಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ತೀವ್ರ ತರಾಟೆಗೆತ್ತಿಕೊಂಡಿದೆ.

ಶುದ್ಧ ಗಂಗಾ ಯೋಜನೆಯಡಿ ಗೋಮುಖ ನದಿಪಾತ್ರದಿಂದ ಉನ್ನಾವೊವರೆಗಿನ ಪ್ರದೇಶದಲ್ಲಿ ನದಿ ನೀರನ್ನು ಸ್ವಚ್ಛಗೊಳಿಸಲು ಇದುವರೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರ ಸಲ್ಲಿಸಬೇಕೆಂದು ಎಪ್ರಿಲ್ 3ರಂದು ಆದೇಶ ನೀಡಿದ್ದರೂ ಈ ಆದೇಶವನ್ನು ಪಾಲಿಸಲಾಗಿಲ್ಲ ಎಂದು ಎನ್‌ಜಿಟಿಯ ಹಂಗಾಮಿ ಅಧ್ಯಕ್ಷ ನ್ಯಾ.ರಹೀಂ ನೇತೃತ್ವದ ನ್ಯಾಯಪೀಠ ಅಸಮಾಧಾನ ಸೂಚಿಸಿದೆ.

ಚಿಕಿತ್ಸಾ ಘಟಕದ ಸ್ಥಾಪನೆ ಸೇರಿದಂತೆ ಕೈಗೊಳ್ಳಲಾದ ಹಲವು ಕ್ರಮಗಳ ಬಗ್ಗೆ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸುವಂತೆ ನಿಮಗೆ ತಿಳಿಸಲಾಗಿತ್ತು. ಇದುವರೆಗೆ ಏನು ಮಾಡಿದಿರಿ.. ಯಾಕೆ ಸೂಚನೆಯನ್ನು ಪಾಲಿಸಿಲ್ಲ . ನೀವು ನಡೆಸಿದ ಸಭೆಗಳು ಅಥವಾ ನಿಮ್ಮ ವಾದದ ಬಗ್ಗೆ ನಾವು ಮಾತನಾಡುತ್ತಿಲ್ಲ. ನಾವು ಪಾಲನಾ ವರದಿ ಸಲ್ಲಿಸುವಂತೆ ತಿಳಿಸಿದ ಆದೇಶದ ಬಗ್ಗೆ ಹೇಳುತ್ತಿದ್ದೇವೆ. ನಮಗೆ ವರದಿ ಬೇಕು . ಮೇ 23ರ ಒಳಗೆ ವರದಿ ಸಲ್ಲಿಸಿ ಎಂದು ನ್ಯಾಯಪೀಠ ಸೂಚಿಸಿತು.

ಜೊತೆಗೆ, ತನ್ನ ನಿರ್ದೇಶನವನ್ನು ಪಾಲಿಸಿರುವ ಬಗ್ಗೆ ವರದಿ ಸಲ್ಲಿಸುವಂತೆ ಚರ್ಮ ಹದಗೊಳಿಸುವ ಕೈಗಾರಿಕೆಗಳಿಗೆ ಸೂಚಿಸಿದ ನ್ಯಾಯಮಂಡಳಿ, ಮೇ 23ರ ಕಲಾಪದಲ್ಲಿ ಉನ್ನಾವೊದಿಂದ ಉತ್ತರಪ್ರದೇಶದ ಗಡಿವರೆಗಿನ ಗಂಗಾನದಿ ನೀರು ಶುದ್ಧೀಕರಣ ಪ್ರಕ್ರಿಯೆಯ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿತು. ಅಲ್ಲದೆ ಬಿಹಾರದಿಂದ ಬಂಗಾಲದವರೆಗಿನ ಪ್ರದೇಶದಲ್ಲಿ ಹರಿಯುವ ಗಂಗಾ ನದಿ ನೀರಿನ ಶುದ್ಧೀಕರಣ ಕಾರ್ಯದ ಕುರಿತ ದಾಖಲೆಗಳನ್ನು ಸಲ್ಲಿಸುವಂತೆ ಎನ್‌ಜಿಟಿಯ ಪೂರ್ವವಿಭಾಗದ ಪೀಠಕ್ಕೆ ಸೂಚಿಸಿತು. ಕಾಸ್‌ಗಂಜ್, ಬರೇಲಿ, ಕನೌಜ್ ಮತ್ತು ರಾಂಪುರದಲ್ಲಿ ನಿರ್ವಹಿಸುವ ಕಾರ್ಯದ ಯೋಜನಾ ವಿವರವನ್ನು ಈ ಹಿಂದೆಯೇ ಸಲ್ಲಿಸಿರುವುದಾಗಿ ಉ.ಪ್ರದೇಶ ಜಲನಿಗಮವು ಎನ್‌ಜಿಟಿಗೆ ತಿಳಿಸಿತ್ತು.

  ಕಳೆದ ಎರಡು ವರ್ಷಗಳಲ್ಲಿ ಗಂಗೆ ಶುದ್ಧೀಕರಣ ಕಾರ್ಯಕ್ಕೆ ಸರಕಾರ 7,000 ಕೋಟಿ ರೂ.ಗೂ ಅಧಿಕ ಮೊತ್ತದ ಹಣ ವ್ಯಯಿಸಿದ್ದರೂ, ಗಂಗಾ ನದಿಯ ನೀರು ಇನ್ನೂ ಶುದ್ಧವಾಗಿಲ್ಲ ಎಂದು ಎನ್‌ಜಿಟಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News