ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ: ಉಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು ಹೀಗೆ
ಶ್ರೀನಗರ, ಮೇ 15: ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದ ಬೆಳವಣಿಗೆಯ ಬಳಿಕ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕರ್ನಾಟಕ ಚುನಾವಣಾ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನ ಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಯ ಜಯ ಗಳಿಸಿರುವುದು ಹಾಗೂ ಕಾಂಗ್ರೆಸ್ ವಿಫಲವಾಗಿರುವುದರ ಬಗ್ಗೆ ಅವರು ಜಗತ್ಪಸಿದ್ಧ ನಾಟಕಾರ ಶೇಕ್ಸ್‌ಪಿಯರ್‌ನ ಜೂಲಿಯಸ್ ಸೀಸರ್ ನಾಟಕದ ನುಡಿಗಟ್ಟೊಂದನ್ನು ಬಳಸಿ ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಟ್ವಿಟ್ಟರ್‌ನಲ್ಲಿ ಮೂರು ಪದ ‘ಎಟ್ ಟು ಕರ್ನಾಟಕ’ ಎಂದು ಟ್ವೀಟ್ ಮಾಡಿದ್ದಾರೆ. ಅಬ್ದುಲ್ಲಾ ಅವರು ಜೂಲಿಯಸ್ ಸೀಸರ್‌ನ ‘ಭವ್ಯತೆಯ ದುರಂತ’ವನ್ನು ಉಲ್ಲೇಖಿಸಿದ್ದಾರೆ.
‘ಎಟ್ ಟು ಬ್ರುಟಸ್’ ಲ್ಯಾಟೀನ್ ನುಡಿಗಟ್ಟು. ಇದರ ಅನುವಾದ ‘ನೀನು ಕೂಡ ಬ್ರೂಟಸ್’. ಇದು ದ್ರೋಹವನ್ನು ಸಂಕೇತಿಸುತ್ತದೆ. ನಾಟಕದಲ್ಲಿ ಸೀಸರ್‌ಗೆ ಆತನ ಆಪ್ತ ಗೆಳೆಯ ಬ್ರೂಟಸ್ ಇರಿಯತ್ತಾನೆ. 2014ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್ ವಿಧಾನ ಸಭೆ ಚುನಾವಣೆಗಳಲ್ಲಿ ಒಂದರ ಹಿಂದೆ ಒಂದರಂತೆ ಸೋಲುತ್ತಾ ಬಂತು. ಈಗ ಪಂಜಾಬ್ ಮಿಝೊರಾಂ, ಪುದುಚೇರಿಯಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ಇದೆ.