ನೀರಿನಲ್ಲಿ ವಿಷಾಂಶ ಮಿಶ್ರಣದ ಶಂಕೆ : ಗಂಗಾ ನದಿಯಲ್ಲಿ ಸಾವಿರಾರು ಮೀನುಗಳ ಸಾವು
ಲಕ್ನೊ, ಮೇ 15: ಗಂಗಾ ನದಿಯಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡು ಬಂದಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕನೇ ಬಾರಿ ಇಂತಹ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕನೌಜ್ ಬಳಿ ನದಿ ನೀರಿನಲ್ಲಿ ಮೀನುಗಳು ಸತ್ತು ತೇಲುತ್ತಿರುವುದು ಮೊದಲು ಕಂಡುಬಂದಿದ್ದು ಬಳಿಕ ಉನ್ನಾವೊ ಮತ್ತು ಬಿಲ್ಹಾರ್‌ನಲ್ಲೂ ಇದೇ ಘಟನೆ ಪುನರಾವರ್ತನೆಯಾಗಿದೆ. ಕನೌಜ್ ಜಿಲ್ಲಾ ದಂಡಾಧಿಕಾರಿ ರವೀಂದ್ರ ಕುಮಾರ್ ಉತ್ತರಪ್ರದೇಶ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಷ್ಟ್ರೀಯ ವನ್ಯಜೀವಿ ಸಂಸ್ಥೆಯ ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸತ್ತ ಮೀನುಗಳ ಹಾಗೂ ನದಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಮೀನುಗಳು ಸಾಯಲು ನಿಖರವಾದ ಕಾರಣ ಈ ವಾರಾಂತ್ಯ ತಿಳಿಯಲಿದೆ ಎಂದವರು ತಿಳಿಸಿದ್ದಾರೆ.
ಶಹಜಹಾನ್‌ಪುರದಲ್ಲಿ ಕೈಗಾರಿಕಾ ಸಂಸ್ಥೆಗಳ ತ್ಯಾಜ್ಯ ನೀರು ನದಿಗೆ ಸೇರಿದ ಕಾರಣ ನೀರಿನಲ್ಲಿ ವಿಷದ ಅಂಶ ಹೆಚ್ಚಿರುವುದು ಮೀನುಗಳು ಸಾಯಲು ಕಾರಣ ಎಂದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಕುಮಾರ್ ತಿಳಿಸಿದ್ದಾರೆ. ಶಹಜಹಾನ್‌ಪುರದಲ್ಲಿ ಉಗಮಿಸಿ ಕನೌಜ್‌ನಲ್ಲಿ ಗಂಗಾ ನದಿಯೊಂದಿಗೆ ಸಂಗಮವಾಗುವ ಗರ್ರ ನದಿಯ ನೀರಿನಲ್ಲಿ ವಿಷದ ಪ್ರಮಾಣ ಇರುವುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ನೀರಿಗೆ ವಿಷ ಬೆರೆಸಲಾಗಿದೆಯೇ ಎಂಬುದು ಪರೀಕ್ಷೆಯ ಬಳಿಕ ದೃಢಪಡಲಿದೆ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ, ಸತ್ತು ತೇಲುತ್ತಿರುವ ಮೀನುಗಳನ್ನು ತಿನ್ನಲೆಂದು ಸ್ಥಳೀಯರು ಸಂಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ, ನದಿಯಲ್ಲಿ ತೇಲುತ್ತಿರುವ ಮೀನುಗಳನ್ನು ಸಂಗ್ರಹಿಸಿ ನಾಶಗೊಳಿಸಲು ಪಂಚಾಯತ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸತ್ತ ಮೀನುಗಳನ್ನು ತಿಂದರೆ ಭೇದಿ, ಕರುಳಿನ ಸಮಸ್ಯೆ ಇತ್ಯಾದಿ ಕಾಡಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ಉನ್ನಾವೊದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಉಪವಿಭಾಗೀಯ ದಂಡಾಧಿಕಾರಿ ಪ್ರದೀಪ್ ಕುಮಾರ್, ಕನೌಜ್‌ನಿಂದ ಹರಿದು ಬರುತ್ತಿರುವ ನೀರಿನಲ್ಲಿರುವ ಯಾವುದೋ ಅಂಶವೊಂದು ಮೀನುಗಳ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.