ಗೋದಾವರಿಯಲ್ಲಿ ದೋಣಿ ಮುಳುಗಿ 40 ಮಂದಿ ಜಲಸಮಾಧಿ

Update: 2018-05-16 03:52 GMT

ಹೈದರಾಬಾದ್, ಮೇ 16: ಪ್ರತಿಕೂಲ ಹವಾಮಾನದಿಂದಾಗಿ ಗೋದಾವರಿ ನದಿಯಲ್ಲಿ ಮಂಗಳವಾರ ಸಂಜೆ ದೋಣಿ ಅಪಘಾತ ಸಂಭವಿಸಿ ಕನಿಷ್ಠ 40 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರಲ್ಲಿ ಬಹುತೇಕ ಮಂದಿ ಬುಡಕಟ್ಟು ಜನಾಂಗದವರು. 50 ಪ್ರಯಾಣಿಕರನ್ನು ತುಂಬಿದ್ದ ನಾವೆ, ನದಿ ದಂಡೆಯಲ್ಲಿರುವ ಕೊಂಡಮೊಡಲು ಎಂಬ ಬುಡಕಟ್ಟು ಗ್ರಾಮದಿಂದ ರಾಜ ಮಹೇಂದ್ರಿಗೆ ಹೋಗುತ್ತಿತ್ತು ಎನ್ನಲಾಗಿದೆ. ದೇವಿಪಟ್ಟಣಂ ತಲೂಕು ಮಂತೂರು ಗ್ರಾಮದ ಬಳಿ ದೋಣಿ ಬಲವಾದ ಗಾಳಿಯ ಹೊಡೆತಕ್ಕೆ ಸಿಲುಕಿ, ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪ್ರಯಾಣಿಕರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 10 ಮಂದಿ ಈಜಿ ದಡ ಸೇರಿದ್ದಾರೆ. ಉಳಿದ ಪ್ರಯಾಣಿಕರು ಜಲ ಸಮಾಧಿಯಾಗಿರಬಹುದು ಎಂಧು ಶಂಕಿಸಲಾಗಿದೆ. ಆದರೆ ಇದುವರೆಗೂ ಅವರ ದೇಹಗಳು ಪತ್ತೆಯಾಗಿಲ್ಲ. ವಿವಾಹ ತಂಡದ 20 ಮಂದಿಯೂ ಈ ನತದೃಷ್ಟ ನೌಕೆಯಲ್ಲಿ ಪ್ರಯಾಣಿಸುತ್ತಿದ್ದರು. ಸ್ಥಳೀಯರು ಪರಿಹಾರ ಕಾರ್ಯಾಚರಣೆಗೆ ಧುಮುಕಿ 10 ಮಂದಿಯನ್ನು ರಕ್ಷಿಸಿದರು ಎನ್ನಲಾಗಿದೆ.

ಎನ್‌ಡಿಆರ್‌ಎಫ್ ತಂಡ ಹಾಗೂ ಜಿಲ್ಲಾ ವಿಕೋಪ ಪರಿಹಾರ ತಂಡ ಕೂಡಾ ಸ್ಥಳಕ್ಕೆ ಧಾವಿಸಿದೆ. ಘಟನೆಯ ಹಿನ್ನೆಲೆಯಲ್ಲಿ ಲಕ್ಷ್ಮೀವೆಂಕಟೇಶ್ವರ ದೋಣಿ ಸೇವೆ ಸಂಸ್ಥೆಯ ಮಾಲಕ ಮುಹಮ್ಮದ್ ಖಾಜಾ ಪೊಲೀಸರಿಗೆ ಶರಣಾಗಿದ್ದಾರೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಕಳೆದ ಶುಕ್ರವಾರ ಖಾಸಗಿ ನಾವೆಯೊಂದರಲ್ಲಿ 90 ಮಂದಿ ಪ್ರಯಾಣಿಸುತ್ತಿದ್ದಾಗ ಗೋದಾವರಿ ನದಿಯ ಮಧ್ಯದಲ್ಲಿ ಬೆಂಕಿ ತಗುಲಿದರೂ, ಎಲ್ಲ ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News