ಪ. ಬಂಗಾಳ ಹಿಂಸಾಚಾರ : ಬಂದೂಕುಧಾರಿ ದುಷ್ಕರ್ಮಿಗಳಿಂದ ಮತಪೆಟ್ಟಿಗೆ ಅಪಹರಣ

Update: 2018-05-16 11:45 GMT
ಚಿತ್ರ ಕೃಪೆ : ANI

ಕೊಲ್ಕತ್ತಾ,ಮೇ.16 : ಬಂದೂಕುಧಾರಿ ಅಪರಿಚಿತ ದುಷ್ಕರ್ಮಿಗಳು ಮಾಲ್ಡಾ ಜಿಲ್ಲೆಯ ರತುವಾ ಎಂಬಲ್ಲಿನ ಮತದಾನ ಕೇಂದ್ರ 76ರಿಂದ ಮತಪೆಟ್ಟಿಗೆಯೊಂದಿಗೆ ಪರಾರಿಯಾದ ಘಟನೆ  ಬುಧವಾರ ನಡೆದಿದೆ. ಮತದಾನ ಕೇಂದ್ರದಲ್ಲಿ ಮರು ಮತದಾನ ನಡೆಯುತ್ತಿದ್ದಾಗ ಸಂಭವಿಸಿದ ಈ ಆಘಾತಕರ ಬೆಳವಣಿಗೆಯಿಂದ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಮಂಗಳವಾರದ ಚುನಾವಣೆ ವೇಳೆ ನಡೆದ ವ್ಯಾಪಕ ಹಿಂಸಾಚಾರದಲ್ಲಿ 12 ಮಂದಿ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬುಧವಾರ  ಮುರ್ಷಿದಾಬಾದ್ ನಲ್ಲಿ ಬಾಂಬ್ ದಾಳಿ ಹಾಗೂ ಇತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ  ಇಬ್ಬರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ದಾಳಿಗಳಿಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ(ಎಂ) ಕಾರಣ ಎಂದು  ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಉತ್ತರ ದಿನಜಪುರದ ಗೋಲ್ ಪೊಖರ್ ಎಂಬಲ್ಲಿ ಮತದಾನ ವಿಳಂಬವನ್ನು ಪ್ರತಿಭಟಿಸುತ್ತಿದ್ದ ಮಂದಿಯನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸೋಮವಾರ 19 ಜಿಲ್ಲೆಗಳ 568 ಬೂತುಗಳಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಬುಧವಾರಕ್ಕೆ ಮುಂದೂಡಲಾಗಿತ್ತು. ಅಂತೆಯೇ ಇಂದು ಮುರ್ಷಿದಾಬಾದ್ ನ 63 ಕೇಂದ್ರಗಳಲ್ಲಿ, ಕೂಚ್ ಬಿಹಾರ್ ನ 52 ಕೇಂದ್ರಗಳಲ್ಲಿ, ಪಶ್ಚಿಮ ಮಿಡ್ನಾಪುರ ಹಾಗೂ ಹೂಗ್ಲಿ ಮುಂತಾದೆಡೆ ಮತದಾನ ನಡೆದಿದೆ.

ಪಶ್ಚಿಮ ಬಂಗಾಳ ಹಿಂಸಾಚಾರವನ್ನು ಪ್ರಧಾನಿ ನರೇಂದ್ರ ಮೋದಿ 'ಪ್ರಜಾಪ್ರಭುತ್ವದ ಕೊಲೆ' ಎಂದು ಬಣ್ಣಿಸಿ ಬಲವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News