ಮೇವು ಹಗರಣ: ಲಾಲೂಗೆ ಜಾಮೀನು, ಜೈಲಿನಿಂದ ಬಿಡುಗಡೆಗೆ ಆದೇಶ

Update: 2018-05-16 13:59 GMT

ಪಟ್ನಾ, ಮೇ 16: ಜಾರ್ಖಂಡ್ ಉಚ್ಚ ನ್ಯಾಯಾಲಯವು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್‌ಗೆ ವೈದ್ಯಕೀಯ ನೆಲೆಯಲ್ಲಿ ಎಲ್ಲ ಮೇವು ಹಗರಣಗಳಲ್ಲಿ ನಿಬಂಧನಾತ್ಮಕ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಬುಧವಾರ ಆರ್‌ಜೆಡಿ ಮುಖ್ಯಸ್ಥನ ಬಿಡುಗಡೆಗೆ ಆದೇಶವನ್ನು ನೀಡಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್, ಆರ್‌ಸಿ 64ಎ/96ಚೈಬಾಸಾ ಖಜಾನೆ ಮತ್ತು ಆರ್‌ಸಿ 38ಎ/96 ದುಮ್ಕಾ ಖಜಾನೆ ಹಗರಣದಲ್ಲಿ ಲಾಲೂಗೆ ಜಾಮೀನು ಮಂಜೂರು ಮಾಡಿದರೆ ನ್ಯಾಯಾಧೀಶ ಎಸ್.ಎಸ್ ಪ್ರಸಾದ್ ಆರ್‌ಸಿ68ಎ/96 ಚೈಬಾಸಾ ಖಜಾನೆ ಹಗರಣದಲ್ಲಿ ಜಾಮೀನು ನೀಡಿದ್ದರು. ಜಾಮೀನು ಪಡೆಯಲು ಮೂರು ಪ್ರಕರಣಗಳಲ್ಲಿ ತಲಾ ಐವತ್ತು ಸಾವಿರ ರೂ. ಭದ್ರತೆ ಹಾಗೂ ಸಂಬಂಧಿತ ಬಾಂಡ್‌ಗೆ ಸಹಿ ಹಾಕುವ ಮೂಲಕ ಲಾಲೂ ಜೈಲಿನಿಂದ ಹೊರಬರಲು ಅಗತ್ಯವಿದ್ದ ಔಪಚಾರಿಕತೆಗಳನ್ನು ಮುಗಿಸಲಾಗಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ಸದ್ಯ ಜಾಮೀನಿನ ಪ್ರತಿಯು ಜೈಲಧಿಕಾರಿಗಳ ಕೈ ಸೇರಿದ್ದು ಲಾಲೂ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ ಎಂದು ವಕೀಲ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News