ಮಮತಾ ಬ್ಯಾನರ್ಜಿಗೆ ದೂರವಾಣಿ ಕರೆ ಮಾಡಿ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ ಕುಮಾರಸ್ವಾಮಿ

Update: 2018-05-16 14:39 GMT

ಕೋಲ್ಕತಾ,ಮೇ 16: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ರಾಜ್ಯದಲ್ಲಿ ಸರಕಾರ ರಚನೆಯ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ. ಮಂಗಳವಾರವಷ್ಟೇ ಬ್ಯಾನರ್ಜಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಕರೆ ಮಾಡಿ ಚುನಾವಣೆಯಲ್ಲಿ ಪಕ್ಷದ ಸಾಧನೆಗಾಗಿ ಅಭಿನಂದಿಸಿದ್ದರು.

ಬಿಜೆಪಿಯ ಮೇಲೆ ಒತ್ತಡವನ್ನು ಹೆಚ್ಚಿಸುವಂತೆ ಬ್ಯಾನರ್ಜಿ ಕುಮಾರಸ್ವಾಮಿಯವರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದವು.

ತನ್ಮಧ್ಯೆ,ಕರ್ನಾಟಕದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂದಿರುವ ಬಿಜೆಪಿಯನ್ನು ಸರಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದರೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧರಿಸಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ದೂರನ್ನು ಸಲ್ಲಿಸುವ ಯೋಜನೆಯನ್ನೂ ಹಾಕಿಕೊಂಡಿದೆ.

ಬ್ಯಾನರ್ಜಿ ಜೊತೆ ಮಾತುಕತೆ ನಡೆಸಿದ ಸ್ವಲ್ಪಹೊತ್ತಿನ ಬಳಿಕ ಕುಮಾರಸ್ವಾಮಿ ಅವರು,ಬಿಜಿಪಿಯನ್ನು ಸರಕಾರ ರಚನೆಗೆ ಆಹ್ವಾನಿಸಲು ರಾಜ್ಯಪಾಲರು ನಿರ್ಧರಿಸಿದರೆ ಅದನ್ನು ವಿರೋಧಿಸಿ ರಾಜಭವನದ ಹೊರಗೆ ಧರಣಿ ಕುಳಿತುಕೊಳ್ಳುವುದಾಗಿ ಪ್ರಕಟಿಸಿದರು.

ಮಂಗಳವಾರ ಮತಎಣಿಕೆ ಸಂದರ್ಭ ಬಿಜೆಪಿಯ ಮುನ್ನಡೆ ಹೆಚ್ಚಿದಾಗ ಬ್ಯಾನರ್ಜಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಟ್ವೀಟಿಸಿದ್ದರು. ಇದರ ನಂತರ ಉಭಯ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟು,ಸರಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾದ ಬಳಿಕ ಬ್ಯಾನರ್ಜಿ ದೇವೇಗೌಡರಿಗೆ ದೂರವಾಣಿ ಕರೆಯನ್ನು ಮಾಡಿ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News