ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ಮಾರಲು ಹೊರಟ ವ್ಯಕ್ತಿಯ ಬಂಧನ

Update: 2018-05-16 17:37 GMT

ಚಂಡಿಗಢ, ಮೇ 16: ವ್ಯಕ್ತಿಯೋರ್ವ ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ಮಾರಲು ಯತ್ನಿಸಿದ ಘಟನೆ ಮೊಹಾಲಿಯ 6 ಸಿವಿಲ್ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಈ ಘಟನೆ ಬಗ್ಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಆಘಾತ ವ್ಯಕ್ತಪಡಿಸಿದ್ದಾರೆ. ತನ್ನ ಪತ್ನಿ ಸೋಮವಾರ ಅಪರಾಹ್ನ 2 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಮಗುವನ್ನು ಮಾರಲು ಬಯಸಿದ್ದಾಳೆ ಎಂದು ಆರೋಪಿ ಜಸ್ಪಾಲ್ ಸಿಂಗ್ ವೈದ್ಯರಲ್ಲಿ ಹೇಳಿದ್ದ. ವೈದ್ಯರು ಶಿಶು ಎಲ್ಲಿದೆ ಎಂದು ಕೇಳಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಮಗುವನ್ನು ತೋರಿಸಿದ್ದ. ಕೂಡಲೇ ವೈದ್ಯರು ಮಗುವನ್ನು ತುರ್ತು ನಿಗಾ ಘಟಕಕ್ಕೆ ಕೊಂಡೊಯ್ದರು. 

ಈ ಸಂದರ್ಭ ಅದು ಹೆಣ್ಣು ಮಗು ಎಂಬುದು ತಿಳಿದುಬಂತು. ಮಗು ರೋಗಪೀಡಿತವಾಗಿತ್ತು ಹಾಗೂ ಆಗಾಗ ವಾಂತಿ ಮಾಡುತ್ತಿತ್ತು. ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ಈ ಬಗ್ಗೆ ಪೊಲೀಸ್‌ಗೆ ಮಾಹಿತಿ ನೀಡಲಾಯಿತು. ಕೂಡಲೇ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಜಸ್ಪಾಲ್‌ನನ್ನು ವಶಕ್ಕೆ ಪಡೆದುಕೊಂಡರು. ಜಸ್ಪಾಲ್‌ಗೆ ಈಗಾಗಲೆ 10 ಹಾಗೂ 5 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೊಹಾಲಿಯ ಕೆವಿ ಮಾಲ್‌ನಲ್ಲಿರುವ ರಿಲಯನ್ಸ್ ಫ್ರೆಶ್ ಸ್ಟೋರ್‌ನಲ್ಲಿ ಜಸ್ಪಾಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೆರಿಗೆ ಆದ ಕೆಲವೇ ಗಂಟೆಗಳ ಬಳಿಕೆ ಜಸ್ಪಾಲ್ ಮಗುವನ್ನು ಮಾರಲು ಯತ್ನಿಸಿದ್ದರು. ಪತ್ನಿಯ ಚಿಕಿತ್ಸೆಗೆ ಹಣ ಬೇಕಾಗಿತ್ತು. ಅದಕ್ಕಾಗಿ ಮಗುವನ್ನು ಮಾರಾಟ ಮಾಡುವಂತೆ ಆಕೆಯೇ ಹೇಳಿದ್ದಳು ಎಂದು ಜಸ್ಪಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News