ನ್ಯಾಯಯುತ ವಿಚಾರಣೆ ನಡೆಸದೆ ಬಂಧಿಸಕೂಡದು: ಸುಪ್ರೀಂ

Update: 2018-05-16 17:15 GMT

ಹೊಸದಿಲ್ಲಿ, ಮೇ 16: ನ್ಯಾಯಯುತ ವಿಚಾರಣೆ ನಡೆಸದೆ ಬಂಧನಕ್ಕೆ ಯಾವುದೇ ಸಂಸತ್ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಆದರ್ಶ್ ಕುಮಾರ್ ಗೋಯಲ್ ಹಾಗೂ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ಪೀಠವು ತಿಳಿಸಿದೆ. ಮೇನಕಾ ಗಾಂಧಿ ಪ್ರಕರಣದಲ್ಲಿ ಪ್ರತಿಪಾದಿಸಲಾಗಿರುವ ತಾರ್ಕಿಕತೆಯ ತತ್ವವು ಎಲ್ಲ ಪರಿಸ್ಥಿತಿಗೂ ಅನ್ವಯವಾಗುತ್ತದೆ ಎಂದು ಬೊಟ್ಟು ಮಾಡಿದ ನ್ಯಾಯಾಲಯ ಪೀಠವು ಈ ಆದೇಶವನ್ನು ನೀಡಿದೆ.

ಸರಿಯಾದ ವಿಚಾರಣೆ ನಡೆಸದೆ ಓರ್ವ ವ್ಯಕ್ತಿಯನ್ನು ಬಂಧಿಸಬಹುದಾದರೆ ನಾವು ನಾಗರಿಕ ಸಮಾಜದಲ್ಲಿ ಜೀವಿಸುತ್ತಿಲ್ಲ ಎಂದರ್ಥ ಎಂದು ನ್ಯಾಯಾಧೀಶ ಗೋಯಲ್ ತಿಳಿಸಿದ್ದಾರೆ. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಮಾರ್ಚ್ 20ರ ತೀರ್ಪನ್ನು ಹಿಂಪಡೆಯುವಂತೆ ಕೋರಿ ಕೇಂದ್ರ ಸರಕಾರ ಮಾಡಿರುವ ಮನವಿಗೆ ಉತ್ತರಿಸುತ್ತಾ ಪೀಠವು ಈ ಆದೇಶವನ್ನು ನೀಡಿದೆ. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿತ ವ್ಯಕ್ತಿಯ ಸರಿಯಾದ ವಿಚಾರಣೆ ನಡೆಸಿದ ನಂತರವೇ ಉನ್ನತ ಅಧಿಕಾರಿಗಳ ಸಮ್ಮತಿ ಪಡೆದು ಬಂಧಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಮಾರ್ಚ್ 20ರತೀರ್ಪಿನಲ್ಲಿ ತಿಳಿಸಿತ್ತು. ಈ ತಿದ್ದುಪಡಿಯಿಂದ ಎಸ್ಸಿ/ಎಸ್ಟಿ ಕಾಯ್ದೆಯನ್ನು ಸಡಿಲಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಮತ್ತು ರಾಜಕಾರಣಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರ ಮನವಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News