ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಉ.ಪ್ರದೇಶ ಮಾಜಿ ಸಚಿವ ಪ್ರಜಾಪತಿಯ ಜಾಮೀನು ಅರ್ಜಿ ತಿರಸ್ಕೃತ

Update: 2018-05-16 17:22 GMT

ಹೊಸದಿಲ್ಲಿ, ಮೇ 16: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರಿಗೆ ಪೀಡನೆ ನೀಡಲು ಯತ್ನಿಸಿದ ಉತ್ತರಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಸಹಿತ 7 ಮಂದಿ ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.

ಸಮಾಜವಾದಿ ಪಕ್ಷದ ಮುಖಂಡ ಪ್ರಜಾಪ್ರತಿ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ ಸೂಚಿಸಿದ ಉತ್ತರಪ್ರದೇಶ ಸರಕಾರ, ಪ್ರಜಾಪತಿ ಸೇರಿದಂತೆ ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯ ಆರೋಪಪಟ್ಟಿ ದಾಖಲಿಸಿದ್ದು ವಿಚಾರಣೆ ಪ್ರಗತಿಯಲ್ಲಿದೆ. ದೂರುದಾರರ, ಸಾಕ್ಷಿಗಳ ಹಾಗೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಆರೋಪಿಗಳ ವಿರುದ್ಧ ‘ಮೊದಲ ನೋಟಕ್ಕೆ ತೋರುವ’ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಅಲ್ಲದೆ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ ಎಂದು ತಿಳಿಸಿತ್ತು.

ರಾಜ್ಯ ಸರಕಾರದ ಆಕ್ಷೇಪವನ್ನು ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠಕ್ಕೆ ಸಲ್ಲಿಸಲಾಯಿತು. ಸಚಿವರಾಗಿದ್ದ ಪ್ರಜಾಪತಿ ಹಾಗೂ ಆತನ ಸಹಚರರು ಗಣಿಗಾರಿಕೆಯ ಲೈಸೆನ್ಸ್ ದೊರಕಿಸಿಕೊಡುವ ಭರವಸೆ ನೀಡಿ ಹಲವು ಸಮಯದಿಂದ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ಬಳಿಕ ತನ್ನ ಅಪ್ರಾಪ್ತ ವಯಸ್ಕ ಪುತ್ರಿಯ ಮೇಲೂ ಕಣ್ಣು ಹಾಕಿದ್ದರು ಎಂದು ಮಹಿಳೆ ಅಲಹಾಬಾದ್‌ನ ಗೌತಮ್‌ಪಲ್ಲಿ ಠಾಣೆಯಲ್ಲಿ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News