ಕರ್ನಾಟಕದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅವಕಾಶ ಬೇಡ: ಸಿಪಿಐ(ಎಂ)

Update: 2018-05-16 18:15 GMT

ಹೊಸದಿಲ್ಲಿ, ಮೇ 16: ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಿದ್ದರೂ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡಿರುವುದನ್ನು ತೀವ್ರವಾಗಿ ವಿರೋಧಿಸಿರುವ ಸಿಪಿಐ(ಎಂ), ಈ ಕ್ರಮದಿಂದ ‘ಕುದುರೆ ವ್ಯಾಪಾರ’ಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ತಿಳಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನೇಮಕಗೊಂಡಿರುವ ರಾಜ್ಯಪಾಲರು ಈ ಹಿಂದೆ, ವಿಧಾನಸಭೆಯಲ್ಲಿ ಬಹುಮತ ಇರುವ ಚುನಾವಣೋತ್ತರ ಮೈತ್ರಿಕೂಟಕ್ಕೆ ಸರಕಾರ ರಚನೆಗೆ ಆಹ್ವಾನ ನೀಡುವ ಸಂಪ್ರದಾಯವನ್ನು ಪಾಲಿಸಿದ್ದರು. 

2017ರಲ್ಲಿ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ 40 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಕಾಂಗ್ರೆಸ್‌ಗೆ 17, ಬಿಜೆಪಿ 13 ಸ್ಥಾನ ಗೆದ್ದಿತ್ತು. ಆದರೆ ಚುನಾವಣೋತ್ತರ ಮೈತ್ರಿಕೂಟ ರಚಿಸಿಕೊಂಡ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಲಾಗಿದೆ. ಇದೇ ರೀತಿ 2017ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 28, ಬಿಜೆಪಿ 21 ಸ್ಥಾನ ಗೆದ್ದಿತ್ತು. ಆದರೆ ಚುನಾವಣೋತ್ತರ ಮಿತ್ರಕೂಟ ರಚಿಸಿಕೊಂಡ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಸಿಕ್ಕಿದೆ.

2018ರಲ್ಲಿ ಮೇಘಾಲಯದಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 21, ಬಿಜೆಪಿ ಕೇವಲ 2 ಸ್ಥಾನ ಗಳಿಸಿದ್ದರೂ , ಚುನಾವಣೋತ್ತರ ಮೈತ್ರಿಕೂಟ ರಚಿಸಿಕೊಂಡ ಬಿಜೆಪಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಚುನಾವಣೋತ್ತರ ಮೈತ್ರಿಕೂಟವು ಸ್ಪಷ್ಟ ಬಹುಮತ ಹೊಂದಿರುವ ಕಾರಣ ಇದೇ ಸಂಪ್ರದಾಯವನ್ನು ಪಾಲಿಸಿ ಸರಕಾರ ರಚನೆಗೆ ಆಹ್ವಾನ ನೀಡಿ, ಸುಪ್ರೀಂಕೋರ್ಟ್‌ನ ತೀರ್ಪನ್ನು ಪಾಲಿಸಬೇಕು. ಇದಕ್ಕೆ ವಿಳಂಬಿಸಿದರೆ ಸಾಂವಿಧಾನಿಕ ಕಚೇರಿಯಾಗಿರುವ ರಾಜಭವನವನ್ನು ‘ಕುದುರೆ ವ್ಯಾಪಾರ’ಕ್ಕೆ ದುರುಪಯೋಗ ಪಡಿಸಿದಂತಾಗುತ್ತದೆ .ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಿಪಿಐ(ಎಂ) ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News