ವಾರಣಾಸಿ ಫ್ಲೈಓವರ್ ಕುಸಿತ ಘಟನೆ: ಮರಣೋತ್ತರ ಪರೀಕ್ಷೆಗೆ ಲಂಚ ಕೇಳಿದ ಆಸ್ಪತ್ರೆ
ವಾರಣಾಸಿ, ಮೇ 16: ವಾರಣಾಸಿ ಫ್ಲೈ ಓವರ್ ಕುಸಿದ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಐವರ ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆ ಸಿಬ್ಬಂದಿ ಕುಟುಂಬದವರಿಂದ ತಲಾ 300 ರೂ. ಲಂಚ ಕೇಳಿದ ಅಮಾನವೀಯ ಘಟನೆ ಇಲ್ಲಿ ಬುಧವಾರ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸಲು ಹಿಂದೂ ಬನಾರಸ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ಲಂಚ ಸ್ವೀಕರಿಸುತ್ತಿರುವ ವೀಡಿಯೋವನ್ನು ಘಟನೆಯಲ್ಲಿ ಕುಟುಂಬದ ಐವರು ಸದಸ್ಯರನ್ನು ಕಳೆದುಕೊಂಡಿರುವ ಜೌನ್‌ಪುರ ಮೂಲದ ಜಿತೇಂದ್ರ ಯಾದವ್ ಬಿಡುಗಡೆ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಲು 300 ರೂ. ನೀಡುವಂತೆ ಆಸ್ಪತ್ರೆಯ ಸಿಬ್ಬಂದಿ ಆಗ್ರಹಿಸಿದರು. ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಹಣ ಬೇಡಿಕೆ ಇರಿಸಿದ್ದರು ಎಂದು ಯಾದವ್ ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳಿಂದ ಲಂಚ ಬೇಡಿಕೆ ಆರೋಪ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಯು.ಪಿ. ದಿನೇಶ್ ಶರ್ಮಾ, ನಾವು ಹಣಕ್ಕೆ ಬೇಡಿಕೆ ಇರಿಸಿದ 5ನೇ ದರ್ಜೆಯ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ತನಿಖೆಯ ಬಳಿಕ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.