'ಇವಿಎಂ' ಸಂಶಯ ನಿವಾರಣೆಗೆ ಚುನಾವಣಾ ಆಯೋಗ ಮುಂದಾಗಲಿ: ಯು.ಟಿ.ಖಾದರ್ ಅಭಿಮತ

Update: 2018-05-17 06:25 GMT

ದ.ಕ. ಮತ್ತು ಉಡುಪಿ ಜಿಲ್ಲೆಯ 13 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 1 ಸ್ಥಾನ ಅಂದರೆ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಯು.ಟಿ. ಖಾದರ್ 19,739 ಮತಗಳ ಅಂತರದಿಂದ ಗೆಲ್ಲುವ ಮೂಲಕ ಪಕ್ಷದ ಗೌರವ ಉಳಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತದೆ. ಈ ಮಧ್ಯೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾದರೆ ಯು.ಟಿ. ಖಾದರ್‌ಗೆ ಸಚಿವ ಸ್ಥಾನ ನಿರೀಕ್ಷಿತ ಎಂದು ಹೇಳಲಾಗುತ್ತಿದೆ. ಹಾಗಾಗಿ ಖಾದರ್‌ರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದ ವಿಪಕ್ಷೀಯರು ಮತ್ತು ಅತೃಪ್ತರು ಇದೀಗ ಅಧೀರರಾಗಿದ್ದಾರೆ. ಮುಂದೇನು ಎಂಬ ಕುತೂಹಲಿಗರ ಪ್ರಶ್ನೆಗಳ ಮಧ್ಯೆ ಯು.ಟಿ.ಖಾದರ್ 'ವಾರ್ತಾಭಾರತಿ'ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

►ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಇಂತಹ ಶೋಚನೀಯ ಸ್ಥಿತಿಯಾಗಲು ಕಾರಣ ಏನು?

ಅದೇ... ನಾವು ಕೂಡಾ ಇಂತಹ ಸ್ಥಿತಿಯನ್ನು ನಿರೀಕ್ಷಿಸಿರಲೇ ಇಲ್ಲ. ನಾವೆಲ್ಲ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಿದ್ದೆವು. ಸರಕಾರದ ವಿವಿಧ ಭಾಗ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿದ್ದೆವು. 94 ಸಿಸಿ ಯೋಜನೆಯಡಿ ಅದೆಷ್ಟೋ ಮಂದಿ ಪ್ರಯೋಜನ ಪಡೆದಿದ್ದರು. ಸಿದ್ದರಾಮಯ್ಯ ಅವರ ಅನೇಕ ಕನಸುಗಳನ್ನು ನನಸುಗೊಳಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಮಾಡುತ್ತಾ ಬಂದೆವು. ಎಲ್ಲವನ್ನೂ ಪಡೆದ ಜನತೆ ಯಾಕೆ ನಮ್ಮನ್ನು ಕೈ ಬಿಟ್ಟರೋ ಗೊತ್ತಾಗುತ್ತಿಲ್ಲ.

►ಜಿಲ್ಲೆಯಲ್ಲಿ ಪಕ್ಷ ಸೋತಿದೆ. ಮತ್ತೆ ಅದನ್ನು ಪುನಶ್ಚೇತನ ಮಾಡಲು ಸಾಧ್ಯವೇ?

ದೇಶದ ಮತದಾರ ಬುದ್ಧಿವಂತ. ಆತ ಯಾವತ್ತೂ ಕೂಡ ಒಂದೇ ಪಕ್ಷಕ್ಕೆ ಅಂಟಿಕೊಂಡವನಲ್ಲ. ಬದಲಾವಣೆ ಮಾಡಲು ಬಯಸಿದಾಗ ಬದಲಾಯಿಸಿಯೇ ಬಿಡುತ್ತಾನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಿರಬಹುದು. ಹಾಗಂತ ನಾವು ಎದೆಗುಂದುವುದಿಲ್ಲ. ಎಲ್ಲಾ ನಾಯಕರು ಸೇರಿಕೊಂಡು ತಳಮಟ್ಟದಿಂದಲೇ ಪಕ್ಷ ಕಟ್ಟಲಿದ್ದೇವೆ. ಅದಕ್ಕಾಗಿ ಪಕ್ಷದ ಹಿರಿಯ, ಕಿರಿಯ ನಾಯಕರು, ಕಾರ್ಯಕರ್ತರೊಂದಿಗೆ ಚಿಂತನ-ಮಂಥನ ಮಾಡಲಿದ್ದೇವೆ. ಎಲ್ಲಿ ಎಡವಿದ್ದೇವೆ ಎಂದು ಪರಾಮರ್ಶೆ ಮಾಡಲಿದ್ದೇವೆ. ಆದ ತಪ್ಪನ್ನು ಸರಿಪಡಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲಿದ್ದೇವೆ. ಸೋತೆವು ಅಂತ ಸುಮ್ಮನಾಗುವ ಜಾಯಾಮಾನ ನಮ್ಮದಲ್ಲ.

►ಹಿಂದುತ್ವದ ಅಲೆ ಅಥವಾ ಮೋದಿ ಅಲೆ ಪರಿಣಾಮ ಬೀರಿತೇ?

ಇದೆ... ಇದೆ... ಮೋದಿ ಅಲೆಯೂ ಇದೆ, ಹಿಂದುತ್ವದ ಅಲೆಯೂ ಇದೆ. ಯುವ ಮತದಾರರನ್ನಂತೂ ಹಿಂದುತ್ವವಾದಿಗಳು ಅಪಪ್ರಚಾರದ ಮೂಲಕ ತಮ್ಮತ್ತ ವಾಲಿಸಿಕೊಂಡರು. ನಾವು ನಾಲ್ಕು ವರ್ಷ ಹತ್ತು ತಿಂಗಳು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇವಲ 1 ತಿಂಗಳಲ್ಲಿ ಈ ಬಿಜೆಪಿಗರು, ಮತೀಯವಾದಿ ಶಕ್ತಿಗಳು ಅಪಪ್ರಚಾರದ ಮೂಲಕ ನಮ್ಮನ್ನು ನೇಪಥ್ಯಕ್ಕೆ ಸರಿಸಿಬಿಟ್ಟರು.

►ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರಕಾರ ರಚಿಸುತ್ತವೆಯೇ?

ಹೌದು... ನೂರಕ್ಕೆ ನೂರು ಸರಕಾರ ರಚಿಸುತ್ತೆ, ಆ ವಿಶ್ವಾಸ ಖಂಡಿತಾ ಇದೆ.

►ಬಿಜೆಪಿ ಪ್ರಯತ್ನ ಮುಂದುವರಿಸಿದೆಯಲ್ಲಾ...?

ಅದು ಸಹಜ. ಆದರೆ ಬಹುಮತ ಯಾರಿಗೆ ಇದೆ ಎಂಬುದೂ ಮುಖ್ಯವಾಗುತ್ತದೆ.

►ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದಿದ್ದ ಕಾಂಗ್ರೆಸ್ ಇದೀಗ ಜೆಡಿಎಸ್‌ನೊಂದಿಗೆ ಮೈತ್ರಿ ನಡೆಸುವುದು ಎಷ್ಟು ಸರಿ?

ಚುನಾವಣೆ ಸಂದರ್ಭ ಇಂತಹ ಆರೋಪ-ಪ್ರತ್ಯಾರೋಪಗಳೆಲ್ಲಾ ಸಹಜ. ಅದನ್ನೆಲ್ಲಾ ಕ್ರೀಡಾಮನೋಭಾವದಿಂದ ಸ್ವೀಕರಿಸಬೇಕಾಗಿದೆ. ರಾಜ್ಯದಲ್ಲಿ ಕೋಮುವಾದಿ ಶಕ್ತಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕಾಗಿ ಪಕ್ಷದ ಹಿರಿಯ ನಾಯಕರು ಜೆಡಿಎಸ್‌ನೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ.

►ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸರಕಾರದಲ್ಲಿ ತಮಗೆ ಸಚಿವ ಸ್ಥಾನ ನೀಡಿದರೆ?

ಸರಕಾರದಲ್ಲಾಗಲೀ, ಪಕ್ಷದಲ್ಲಾಗಲೀ ಹೈಕಮಾಂಡ್ ಯಾವ ಜವಾಬ್ದಾರಿ ನೀಡಿದರೂ ಕೂಡ ಅದನ್ನು ವಹಿಸಿಕೊಳ್ಳಲು ಸಿದ್ಧ.

►ಇವಿಎಂ ಬಗ್ಗೆ ಜಿಲ್ಲೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?

ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳು ಮಾತ್ರವಲ್ಲ, ನನಗೂ ಕೂಡ ಈ ಇವಿಎಂ ಬಗ್ಗೆ ಸಂಶಯವಿದೆ. ಇದರಲ್ಲೇನೋ ದೋಷವಿದೆ. ಇವಿಎಂಗೂ ವಿವಿ ಪ್ಯಾಟ್‌ಗೂ ನೇರ ಸಂಪರ್ಕ ಇದ್ದಂತಿಲ್ಲ. ಇದ್ದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲೇ ಈ ಪರಿಯ ಹೊಡೆತ ಬೀಳುತ್ತಿರಲಿಲ್ಲ. ನನ್ನ ಗೆಲುವಿನ ಅಂತರಕ್ಕೂ ಈ ಇವಿಎಂನ ದೋಷಕ್ಕೂ ಏನೋ ಲಿಂಕ್ ಇದ್ದಂತಿದೆ.

►ಇವಿಎಂ ಬಗ್ಗೆ ಮುಂದಿನ ನಿಮ್ಮ ನಿಲುವು ಏನು?

ಇದರ ಬಗ್ಗೆ ನಾನಾಗಲೀ, ಜಿಲ್ಲೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳಾಗಲೀ ಅಪಸ್ವರ ಎತ್ತಿದರೆ ಅಥವಾ ಅಹವಾಲು ಸಲ್ಲಿಸಿದರೆ ಸಾಲದು. ಇದನ್ನು ಕೆಪಿಸಿಸಿ ಅಥವಾ ಎಐಸಿಸಿ ಮಟ್ಟದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ರಾಜ್ಯ ಅಥವಾ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ಮಾಡುವ ಅಗತ್ಯವಿದೆ. ಜೊತೆಗೆ ಹಳೆಯ ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆ ಮುಂದುವರಿಸುವುದು ಒಳಿತು.

►ಇವಿಎಂ ಕುರಿತಾದ ಸಂಶಯ ನಿವಾರಣೆಗೆ ಪರ್ಯಾಯ ಕ್ರಮ ಏನು?

'ಇವಿಎಂ'ನ್ನು ಹ್ಯಾಕ್ ಮಾಡಬಹುದು ಎಂಬುದು ಈಗ ಮನದಟ್ಟಾಗುತ್ತಿದೆ. ಈ ಸಂಶಯ ನಿವಾರಿಸಲು ಕೇಂದ್ರ ಚುನಾವಣಾ ಆಯೋಗವು 'ಇವಿಎಂ' ಹ್ಯಾಕ್ ಕುರಿತು ರಾಷ್ಟ್ರಮಟ್ಟದ ಸ್ಪರ್ಧೆ ಏರ್ಪಡಿಸಬಹುದು. ತಂತ್ರಜ್ಞಾನದಲ್ಲಿ ಪಳಗಿದವರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಬಹುದು ಅಥವಾ ಸೋಲಬಹುದು. ಅಂತೂ ಸಂಶಯ ನಿವಾರಣೆಗೆ ಇಂತಹದ್ದೊಂದು ಪ್ರಯೋಗ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೇಂದ್ರ ಸರಕಾರ ಸೂಕ್ತ ನಿರ್ದೇಶನ ನೀಡಬೇಕಿದೆ.

► ನೀವು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ನಂ.1 ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸತತ 3 ಬಾರಿ ಗೆಲುವು ಸಾಧಿಸಿದ್ದ ನೀವು ಈ ಬಾರಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ಗುರಿ ಹಾಕಿಕೊಂಡವರು. ಆದರೆ, 20 ಸಾವಿರದ ಮತಗಳ ಅಂತರ ದಾಟಲೂ ನಿಮಗೆ ಸಾಧ್ಯವಾಗಿಲ್ಲ. ಯಾಕೆ ಹೀಗಾಯಿತು?

ನನ್ನ ಕ್ಷೇತ್ರದಲ್ಲೂ ಕೂಡ ಕಳೆದ 5 ವರ್ಷಗಳಲ್ಲಿ 900 ಕೋಟಿ ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳಾಗಿವೆ. ಸರಕಾರದ ಎಲ್ಲಾ 'ಭಾಗ್ಯ'ಗಳನ್ನೂ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ತಲುಪಿಸಿದ ತೃಪ್ತಿಯೂ ನನಗಿದೆ. ಪಕ್ಷದ ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶಕ್ತಿ ಮೀರಿ ಶ್ರಮಿಸಿದ್ದರು. ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ನಾವು ಜನರ ಮುಂದೆ ಹೋದಾಗ ವಿಪಕ್ಷೀಯರು ಮತ್ತು ಕೆಲವು ಅತೃಪ್ತರು ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ನನ್ನ ಹಾಗೂ ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದರು. ಆಮಿಷ ಒಡ್ಡಿದರು. ಕೆಲವರು ಅದಕ್ಕೆ ಬಲಿಯೂ ಆದರು. ಆದಾಗ್ಯೂ ಕ್ಷೇತ್ರದ ಪ್ರಜ್ಞಾವಂತ ಮತದಾರರು ನನ್ನ ಕೈ ಬಿಡಲಿಲ್ಲ. ನನ್ನ ಗೆಲ್ಲುವ ಅಂತರದ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ ಕೂಡಾ ನನ್ನನ್ನು ಗೆಲ್ಲಿಸುವ ಮೂಲಕ ಅವಿಭಜಿತ ದ.ಕ.ಜಿಲ್ಲೆಯ ಕಾಂಗ್ರೆಸ್ ಪಕ್ಷದ ಗೌರವವನ್ನು ನನ್ನ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ನನ್ನ ಹಿತೈಷಿಗಳು ಕಾಪಾಡಿದರು ಎಂದರೆ ತಪ್ಪಾಗಲಿಕ್ಕಿಲ್ಲ.

Writer - ಸಂದರ್ಶನ: ಹಂಝ ಮಲಾರ್

contributor

Editor - ಸಂದರ್ಶನ: ಹಂಝ ಮಲಾರ್

contributor

Similar News