ಕರ್ನಾಟಕ ಎಫೆಕ್ಟ್ : ಗೋವಾ ರಾಜ್ಯಪಾಲೆಯನ್ನು ಭೇಟಿಯಾಗಿ ಸರಕಾರ ರಚಿಸಲು ಹಕ್ಕು ಮಂಡನೆ ಮಾಡಲಿರುವ ಕಾಂಗ್ರೆಸ್
ಹೊಸದಿಲ್ಲಿ,ಮೇ.17 : ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗೋವಾದ ಕಾಂಗ್ರೆಸ್ ನಾಯಕರು ತಮ್ಮ ಶಾಸಕಾಂಗ ಪಕ್ಷ ನಾಯಕ ಬಾಬು ಕವ್ಲೇಕರ್ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಸರಕಾರ ರಚಿಸಲು ತಮ್ಮ ಹಕ್ಕು ಮಂಡನೆ ಮಾಡಲು ನಿರ್ಧರಿಸಿದ್ದಾರೆ.
"ರಾಜ್ಯಪಾಲೆಯನ್ನು ಶುಕ್ರವಾರ ಬೆಳಿಗ್ಗೆ ಭೇಟಿಯಾಗಲು ಸಮಯ ಕೇಳಿದ್ದೇವೆ. ನಾವು ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದೇವೆ'' ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೊಡನ್ಕರ್ ಹೇಳಿದ್ದಾರೆ.
"ಕರ್ನಾಟಕದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಾಗೂ ಬಹುಮತವಿರದ ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡಿರುವಾಗ ಗೋವಾದಲ್ಲಿ ಕಾಂಗ್ರೆಸ್ಸಿಗೇಕಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಎಲ್ಲಾ 16 ಮಂದಿ ಶಾಸಕರೂ ರಾಜಭವನಕ್ಕೆ ತೆರಳಲಿದ್ದಾರೆಯೇ ಎಂಬ ಪ್ರಶ್ನೆಗೆ ಕೆಲವರು ವಿದೇಶದಲ್ಲಿದ್ದಾರೆ. ಇಲ್ಲಿ ಇರುವವರೆಲ್ಲರೂ ರಾಜ್ಯಪಾಲೆಯನ್ನು ಭೇಟಿಯಾಗಲಿದ್ದಾರೆ ಎಂದರು.
ಗೋವಾದ ಒಟ್ಟು 40 ಸದಸ್ಯರ ವಿಧಾನಸಭೆಯಲ್ಲಿ 2017ರ ಚುನಾವಣೆಯಲ್ಲಿ 17 ಸ್ಥಾನ ಪಡೆದು ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸದನದಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸುವ ಮುನ್ನ ಅವರು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಬಿಜೆಪಿಗೆ 13 ಸ್ಥಾನಗಳು ದೊರೆತಿದ್ದವು.