ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ......?

Update: 2018-05-17 11:53 GMT

ಕ್ರೆಡಿಟ್ ಕಾರ್ಡ್ ಅನ್ನು ವಿವೇಚನೆಯಿಂದ ಬಳಸುತ್ತಿದ್ದರೆ ಅದು ನಿಜಕ್ಕೂ ಆಪತ್ಬಾಂಧವನಾಗಿದೆ. ಆಕರ್ಷಕ ಪುರಸ್ಕಾರಗಳು ಮಾತ್ರವಲ್ಲ, ಕ್ಯಾಷ್‌ಬ್ಯಾಕ್,ರಿಯಾಯಿತಿಗಳ ಜೊತೆಗೆ ಅಗತ್ಯವಿದ್ದಾಗ ಬಡ್ಡಿರಹಿತ ಅವಧಿಗೆ ತಕ್ಷಣದ ಹಣಕಾಸನ್ನೂ ಅದು ಒದಗಿಸುತ್ತದೆ. ಆದರೆ ನೆನಪಿಡಿ,ಕೊಳ್ಳುಬಾಕ ಸಂಸ್ಕೃತಿಯವರಿಗೆ ಕ್ರೆಡಿಟ್ ಕಾರ್ಡ್ ಹೇಳಿಸಿದ್ದಲ್ಲ,ಅವರು ತಮ್ಮ ಬಜೆಟ್‌ಗೆ ಮೀರಿ ಖರೀದಿ ಮಾಡಿ ಸಾಲದ ಸುಳಿಯಲ್ಲಿ ಸಿಲುಕಲು ಅದು ಕಾರಣವಾಗಬಹುದು.

ಆದರೆ ಕೆಲವರಿಗೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಸವಾಲಿನ ಕೆಲಸವಾಗಬಹುದು. ಇದಕ್ಕೆ ಕಳಪೆ ಕ್ರೆಡಿಟ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಇಲ್ಲದಿರುವುದು, ಅರ್ಹ ಆದಾಯವಿಲ್ಲದಿರುವುದು ಇತ್ಯಾದಿ ಹಲವಾರು ಕಾರಣಗಳಿರಬಹುದು. ಹೆಚ್ಚಿನ ಕಷ್ಟವಿಲ್ಲದೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಮಾರ್ಗೋಪಾಯಗಳು ಇಲ್ಲಿವೆ.....

►ನಿರಖು ಠೇವಣಿಯ ಆಧಾರದಲ್ಲಿ ಕ್ರೆಡಿಟ್ ಕಾರ್ಡ್

ಹಲವಾರು ಪ್ರಮುಖ ಬ್ಯಾಂಕುಗಳು ನೀವು ಅವುಗಳಲ್ಲಿಟ್ಟಿರುವ ಫಿಕ್ಸೆಡ್ ಡಿಪಾಜಿಟ್ ಅಥವಾ ನಿರಖು ಠೇವಣಿಯ ಆಧಾರದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಇಂತಹ ನಿರಖು ಠೇವಣಿ 20,000 ರೂ.ಗಳ ಮೇಲಿರಬೇಕು ಮತ್ತು ಬ್ಯಾಂಕುಗಳು ಠೇವಣಿಯ ಶೇ.80-85ರಷ್ಟು ಕ್ರೆಡಿಟ್ ಕಾರ್ಡ್ ಮಿತಿಯನ್ನು ನಿಗದಿಗೊಳಿಸುತ್ತವೆ. ಇದು ತಮ್ಮ ಕಳಪೆ ಕ್ರೆಡಿಟ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಇಲ್ಲದ ಕಾರಣಗಳಿಂದ ಕ್ರೆಡಿಟ್ ಕಾರ್ಡ್ ಪಡೆಯಲಾಗದವರಿಗೆ ಸುಲಭ ಉಪಾಯವಾಗಿದೆ. ಬ್ಯಾಂಕುಗಳು ಠೇವಣಿಯನ್ನು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಗಳಿಗೆ ಭದ್ರತೆಯನ್ನಾಗಿ ಇಟ್ಟುಕೊಳ್ಳುತ್ತವೆ. ಹೀಗೆ ಠೇವಣಿಗಳ ಆಧಾರದಲ್ಲಿ ಪಡೆಯುವ ಕ್ರೆಡಿಟ್ ಕಾರ್ಡ್‌ಗಳು ಇತರ ಕ್ರೆಡಿಟ್ ಕಾರ್ಡ್‌ಗಳಂತೆ ರಿವಾರ್ಡ್‌ಗಳು ಮತ್ತು ಇತರ ಲಾಭಗಳನ್ನು ಹೊಂದಿರುತ್ತವೆ.

►ನೋ-ಫ್ರಿಲ್ಸ್ ಕಾರ್ಡ್‌ನೊಂದಿಗೆ ಆರಂಭಿಸಿ

ನೀವು ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುತ್ತಿದ್ದರೆ ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದ,ವಾರ್ಷಿಕ ಶುಲ್ಕಗಳಿಲ್ಲದ ಕಡಿಮೆ ವೆಚ್ಚದ ಮಿತಿಯನ್ನು ಹೊಂದಿರುವ ಮತ್ತು ನಿಮ್ಮ ಸದ್ಯದ ಆದಾಯಕ್ಕೆ ಸೂಕ್ತವಾಗಿರುವ ನೋ-ಫ್ರಿಲ್ಸ್ ಅಥವಾ ಬೇಸಿಕ್ ಕಾರ್ಡ್ ಪಡೆದುಕೊಳ್ಳಿ. ಪ್ರೀಮಿಯಂ ಮತ್ತು ಸೂಪರ್ ಪ್ರೀಮಿಯಂ ಕಾರ್ಡ್‌ಗಳನ್ನು ಕಣ್ಣೆತ್ತಿಯೂ ನೋಡಬೇಡಿ. ಅವು ಹೆಚ್ಚಿನ ಅರ್ಹತೆಗಳನ್ನು ಬೇಡುವ ಜೊತೆಗೆ ಭಾರೀ ವಾರ್ಷಿಕ ಶುಲ್ಕಗಳನ್ನೂ ಹೊಂದಿರಬಹುದು. ನಿಮ್ಮ ಮೊದಲ ಕ್ರೆಡಿಟ್ ಕಾರ್ಡ್‌ನ್ನು ವಿವೇಚನೆಯಿಂದ ಬಳಸಿ ಮತ್ತು ಆರೋಗ್ಯಕರ ಕ್ರೆಡಿಟ್ ಹಿಸ್ಟರಿಯನ್ನು ರೂಪಿಸಿಕೊಳ್ಳಿ. ಈ ನೀತಿಯನ್ನು ಸರಿಯಾಗಿ ಪಾಲಿಸಿದರೆ ನೀವು ಹೆಚ್ಚಿನ ವೈಶಿಷ್ಟಗಳು ಮತ್ತು ಹೆಚ್ಚಿನ ವೆಚ್ಚ ಮಿತಿ ಹೊಂದಿರುವ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹರಾಗುತ್ತೀರಿ.

►ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ಕ್ರೆಡಿಟ್ ಕಾರ್ಡ್ ಆಗಿರಲಿ ಅಥವಾ ಸಾಲವಾಗಿರಲಿ,ಇಂತಹ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವ ಮುನ್ನ ಯಾವಾಗಲೂ ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಿ. ಇದರಿಂದ ನಿಮ್ಮ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯಿದ್ದರೆ ಮೊದಲೇ ನಿಮಗೆ ಗೊತ್ತಾಗುತ್ತದೆ. ‘ಫ್ರೀ ಕ್ರೆಡಿಟ್ ರಿಪೋರ್ಟ್’ಗಾಗಿ ಗೂಗಲ್ ಸರ್ಚ್ ಮಾಡಿ ನಿಮ್ಮ ರಿಪೋರ್ಟ್‌ನ್ನು ಪಡೆದುಕೊಳ್ಳಿ. ಇದು ನಿಮ್ಮ ಸ್ವಂತ ಕ್ರೆಡಿಟ್ ಹಿಸ್ಟರಿಯ ಕುರಿತ ವೈಯಕ್ತಿಕ ವಿಚಾರಣೆಯಾಗಿರುತ್ತದೆ . ಇವುಗಳನ್ನು ‘ಸಾಫ್ಟ್ ಕ್ವೈರೀಸ್’ ಎಂದು ಕರೆಯಲಾಗುತ್ತಿದ್ದು,ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಯನ್ನುಂಟು ಮಾಡುವುದಿಲ್ಲ. ನೀವು ಪ್ರತಿ ವರ್ಷ ಎಷ್ಟು ಸಲವಾದರೂ ಈ ವಿಚಾರಣೆಯನ್ನು ಮಾಡಬಹುದು.

►ನಿಮ್ಮ ಕ್ರೆಡಿಟ್ ಸ್ಕೋರ್‌ನ್ನು ಹೆಚ್ಚಿಸಿಕೊಳ್ಳಿ

ಹೆಚ್ಚಿನ ಸಂದರ್ಭಗಳಲ್ಲಿ ಅರ್ಜಿದಾರನ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಸಾಲದ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಕಳಪೆ ಮರುಪಾವತಿ ದಾಖಲೆಯು ಕಡಿಮೆ ಕ್ರೆಡಿಟ್ ಸ್ಕೋರ್‌ಗೆ ಮುಖ್ಯ ಕಾರಣವಾಗಿದೆ. ಕ್ರೆಡಿಟ್ ಹಿಸ್ಟರಿಯಲ್ಲಿನ ತಪ್ಪುಗಳೂ ಅದಕ್ಕೆ ಕಾರಣವಾಗಿರಬಹುದು. ಅದು ಏನಿದ್ದರೂ ನೀವು ಎಚ್ಚೆತ್ತುಕೊಳ್ಳಬೆಕು. ಸಾಲದ ಕಂತುಗಳನ್ನು ಸಕಾಲದಲ್ಲಿ ಮತ್ತು ಸಂಪೂರ್ಣವಾಗಿ ಪಾವತಿಸುವುದರಿಂದ ಕ್ರೆಡಿಟ್ ಸ್ಕೋರ್‌ನ್ನು ಉತ್ತಮಗೊಳಿಸಬಹುದು. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಪಾವತಿ ಬಾಕಿಯುಳಿದುಕೊಂಡಿದ್ದರೆ ಅದನ್ನು ತಕ್ಷಣ ಇತ್ಯರ್ಥಗೊಳಿಸಿ. ನಿಮ್ಮ ಕ್ರೆಡಿಟ್ ವರದಿಯಲ್ಲಿ ತಪ್ಪುಗಳಾಗಿದ್ದರೆ ಅವುಗಳನ್ನು ನಿಮ್ಮ ಬ್ಯಾಂಕ್ ಮತ್ತು ಸಿಬಿಲ್ ಗಮನಕ್ಕೆ ತಂದು ಸರಿಪಡಿಸಿಕೊಳ್ಳಿ.

►ಹಲವಾರು ಅರ್ಜಿಗಳನ್ನು ಸಲ್ಲಿಸಬೇಡಿ

 ನೀವು ಪ್ರತಿಬಾರಿಯೂ ಹೊಸ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ಬ್ಯಾಂಕು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಪರಿಶೀಲಿಸುತ್ತದೆ. ಇಂಥ ವಿಚಾರಣೆಯನ್ನು ‘ಹಾರ್ಡ್ ಕ್ವೈರೀಸ್’ಎಂದು ಕರೆಯಲಾಗುತ್ತದೆ. ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಹಿಸ್ಟರಿಯ ಕುರಿತು ನಡೆಸುವ ಇಂತಹ ಪ್ರತಿಯೊಂದು ವಿಚಾರಣೆಯೂ ನಿಮ್ಮ ಕ್ರೆಡಿಟ್ ಸ್ಕೋರ್‌ನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ. ಹೀಗಾಗಿ ನಿಮ್ಮ ಹಲವಾರು ಕ್ರೆಡಿಟ್ ಕಾರ್ಡ್ ಅರ್ಜಿಗಳು ನಿಮ್ಮ ಕ್ರೆಡಿಟ್ ಸ್ಕೋರ್‌ನ್ನು ಗಣನೀಯವಾಗಿ ತಗ್ಗಿಸುತ್ತವೆ ಮತ್ತು ಹೆಚ್ಚಿನ ಕಾರ್ಡ್‌ಗಳು ಹಾಗೂ ಸಾಲಗಳಿಗೆ ನಿಮ್ಮನ್ನು ಅನರ್ಹರನ್ನಾಗಿಸುತ್ತವೆ. ಹೀಗಾಗಿ ಕ್ರೆಡಿಟ್ ಸ್ಕೋರ್‌ನ್ನು ‘ಸಾಫ್ಟ್ ಕ್ವೈರೀಸ್’ಮೂಲಕ ಮೊದಲೇ ತಿಳಿದುಕೊಂಡು ನೀವು ಅರ್ಹವಾಗಿರುವ ಕಾರ್ಡ್‌ಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡು ಅವುಗಳಲ್ಲೊಂದನ್ನು ಪಡೆಯಲು ಅರ್ಜಿ ಸಲ್ಲಿಸಿ.

►ಸ್ಥಳೀಯ ಬ್ಯಾಂಕನ್ನು ಪ್ರಯತ್ನಿಸಿ

ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಹಲವಾರು ವರ್ಷಗಳಿಂದ ಖಾತೆಗಳನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ಪಡೆಯಲು ಪ್ರಯತ್ನಿಸಿ. ಸುದೀರ್ಘ ಕಾಲದ ಸಂಬಂಧದ ಆಧಾರದಲ್ಲಿ ಕನಿಷ್ಠ ಬೇಸಿಕ್ ಲೆವೆಲ್ ಕ್ರೆಡಿಟ್ ಕಾರ್ಡ್ ಪಡೆಯಲು ನಿಮಗೆ ಸಾಧ್ಯವಾಗಬಹುದು ಮತ್ತು ವಿವೇಚನೆಯಿಂದ ಬಳಕೆ ಹಾಗೂ ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್‌ನ್ನು ಹೆಚ್ಚಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News