ಕರ್ನಾಟಕ ಎಫೆಕ್ಟ್: ಗೋವಾ ನಂತರ ಬಿಹಾರದಲ್ಲಿ ಸರಕಾರ ರಚಿಸಲು ಹಕ್ಕು ಮಂಡಿಸುವುದಾಗಿ ಹೇಳಿದ ಆರ್ ಜೆ ಡಿ

Update: 2018-05-17 12:19 GMT

ಹೊಸದಿಲ್ಲಿ,ಮೇ17 : ಕರ್ನಾಟಕದಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಗೋವಾದ ಕಾಂಗ್ರೆಸ್ ನಾಳೆ ರಾಜ್ಯಪಾಲೆಯನ್ನು ಭೇಟಿಯಾಗಿ ತಾನು ಏಕೈಕ ದೊಡ್ಡ ಪಕ್ಷವಾಗಿರುವ ಕಾರಣ ಸರಕಾರ ರಚಿಸಲು ಹಕ್ಕು ಮಂಡನೆ ಮಾಡಲಾಗುವುದು ಎಂದು ತಿಳಿಸಿದ ಬೆನ್ನಿಗೇ ಬಿಹಾರದಲ್ಲೂ  ಇಂತಹುದೇ ಬೆಳವಣಿಗೆ ನಡೆದಿದೆ. 

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಕೂಡ ತಮ್ಮ ಪಕ್ಷ ಏಕೈಕ ದೊಡ್ಡ ಪಕ್ಷವಾಗಿರುವುದರಿಂದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರನ್ನು ಭೇಟಿಯಾಗಿ ಸರಕಾರ ರಚಿಸಲು ಹಕ್ಕು ಮಂಡನೆ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಜೆಡಿ(ಯು) ಬಿಜೆಪಿ ಮೈತ್ರಿ ಸರಕಾರವಿದೆ. ತೇಜಸ್ವಿ ಯಾದವ್ ತಾವು ತಮ್ಮ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ 2015ರಲ್ಲಿ ನಡೆದ ಚುನಾವಣೆಯಲ್ಲಿ ಆರ್ ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರ ನಿತೀಶ್ ಯಾದವ್ ಅವರ ಜೆಡಿ(ಯು) ಜತೆ ಸೇರಿ ಸರಕಾರ ರಚಿಸಲಾಗಿತ್ತು. ಆಗ ತೇಜಸ್ವಿ ಯಾದವ್ ಡೆಪ್ಯುಟಿ ಸಿಎಂ ಆಗಿದ್ದರು. ನಂತರ ಮೈತ್ರಿಕೂಟದಿಂದ ಹೊರಬಂದ ನಿತೀಶ್ ಬಿಜೆಪಿ ಜತೆ ಕೈಜೋಡಿಸಿ ಸರಕಾರ ರಚಿಸಿದ್ದರು.

ಕಾಂಗ್ರೆಸ್ ತಾನು ಮಣಿಪುರ ಮತ್ತು ಮೇಘಾಲಯದಲ್ಲೂ ಏಕೈಕ ದೊಡ್ಡ ಪಕ್ಷವಾಗಿರುವ ಹೊರತಾಗಿಯೂ ತನಗೆ ಸರಕಾರ ರಚಿಸಲು ಆಹ್ವಾನ ನೀಡದೇ ಇರುವ ಬಗ್ಗೆ ಅಲ್ಲಿ ಕೂಡ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News