ಟೆಸ್ಟ್ ಕ್ರಿಕೆಟ್‌ನಲ್ಲಿ ‘ಟಾಸ್’ ರದ್ದುಪಡಿಸಲು ಕ್ರಿಕೆಟ್ ಸಮಿತಿ ಚಿಂತನೆ!

Update: 2018-05-17 13:56 GMT

 ಹೊಸದಿಲ್ಲಿ, ಮೇ 17: ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಹಾರಿಸುವ ಪ್ರಕ್ರಿಯೆಯನ್ನು ರದ್ದುಪಡಿಸಲು ಐಸಿಸಿ ಕ್ರಿಕೆಟ್ ಸಮಿತಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮುಂಬೈನಲ್ಲಿ ಮೇ 28 ಹಾಗೂ 29ರಂದು ನಡೆಯಲಿರುವ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಕ್ರಿಕೆಟ್ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆಯಿದೆ. ಟೆಸ್ಟ್ ಕ್ರಿಕೆಟ್‌ನ ಸಾಂಪ್ರದಾಯಿಕ ಟಾಸ್ ಹಾರಿಸುವ ಪ್ರಕ್ರಿಯೆ ರದ್ದುಪಡಿಸಬೇಕೇ, ಬೇಡವೇ?ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಟಾಸ್‌ನಿಂದ ಆತಿಥೇಯ ತಂಡಕ್ಕೆ ಹೆಚ್ಚು ಲಾಭವಾಗುತ್ತಿದ್ದು ಪ್ರವಾಸಿ ತಂಡ ನಷ್ಟ ಅನುಭವಿಸುತ್ತಿದೆ ಎಂಬ ವಾದವಿದೆ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಗುರುವಾರ ವರದಿ ಮಾಡಿದೆ.

 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಾಸ್ ಹಾರಿಸುವುದನ್ನು 1877ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವೆ ನಡೆದ ಮೊತ್ತ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಸಲಾಗಿತ್ತು. ಎರಡು ತಂಡಗಳಲ್ಲಿ ಯಾವುದು ಮೊದಲು ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡಬಹುದು ಎನ್ನುವುದನ್ನು ನಿರ್ಧರಿಸಲು ಟಾಸ್ ಹಾರಿಸಲಾಗುತ್ತಿದೆ. ಆತಿಥೇಯ ತಂಡದ ನಾಯಕ ನಾಣ್ಯವನ್ನು ಚಿಮ್ಮಿಸಿದರೆ, ಪ್ರವಾಸಿ ತಂಡದ ನಾಯಕ ಹೆಡ್ಸ್ ಅಥವಾ ಟೇಲ್ಸ್‌ನ್ನು ಆಯ್ಕೆ ಮಾಡುತ್ತಾನೆ.

  ಐಸಿಸಿ 2016ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಿಯಮದೊಂದಿಗೆ ಪ್ರಯೋಗ ಮಾಡಿತ್ತು. ಆದರೆ ಟಾಸ್‌ನ್ನು ಸಂಪೂರ್ಣವಾಗಿ ರದ್ದುಪಡಿಸದೇ ಅದನ್ನು ಒಂದು ಆಯ್ಕೆಯಾಗಿ ಪರಿಗಣಿಸಿತ್ತು. ಪ್ರವಾಸಿ ತಂಡದ ನಾಯಕನಿಗೆ ಮೊದಲಿಗೆ ಬೌಲಿಂಗ್ ಮಾಡುವ ಆಯ್ಕೆ ನೀಡಲಾಗುತ್ತಿತ್ತು. ಅದನ್ನು ಆತ ಒಪ್ಪಿದರೆ ಟಾಸ್ ಹಾರಿಸುತ್ತಿರಲಿಲ್ಲ. ಈ ನಿಯಮ ಬದಲಾವಣೆಯು ಐಸಿಸಿಗೆ ತೃಪ್ತಿ ನೀಡಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಇದನ್ನು ಜಾರಿಗೆ ತರಲು ಯೋಚಿಸುತ್ತಿದೆ. 2019ರಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಈ ನಿಯಮ ಜಾರಿಗೆ ತರಲು ಮುಂದಾಗಿದೆ.

ಟಾಸ್ ರದ್ದತಿಯಿಂದ ಪಂದ್ಯ ಮತ್ತಷ್ಟು ಸಮಯ ನಡೆಯಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತೀವ್ರ ಸ್ಪರ್ಧೆ ಏರ್ಪಡಲಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News