ಸೂಕ್ಷ್ಮ ನೀರಾವರಿ : 5,000 ಕೋ.ರೂ. ನಿಧಿಗೆ ಕೇಂದ್ರ ಸಂಪುಟ ಒಪ್ಪಿಗೆ

Update: 2018-05-17 14:21 GMT

ಹೊಸದಿಲ್ಲಿ, ಮೇ 17: ರೈತರ ಆದಾಯ ಹಾಗೂ ಕೃಷ್ಯುತ್ಪನ್ನಗಳನ್ನು ಹೆಚ್ಚಿಸುವ ಉದ್ದೇಶಕ್ಕೆ ಪೂರಕವಾಗಿ ಇನ್ನಷ್ಟು ಪ್ರದೇಶಗಳನ್ನು ಸೂಕ್ಷ್ಮ ನೀರಾವರಿ ವ್ಯವಸ್ಥೆಯಡಿ ತರಲು 5,000 ಕೋಟಿ ರೂ. ಮೊತ್ತದ ಮೀಸಲು ನಿಧಿಯನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ನಬಾರ್ಡ್‌ನಡಿ ಸ್ಥಾಪಿಸಲಾಗುವ ‘ಮೈಕ್ರೊ ಇರಿಗೇಷನ್ ಫಂಡ್(ಎಂಐಎಫ್)’ ನ ಮೂಲಕ ಸೂಕ್ಷ್ಮ ನೀರಾವರಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರಕಾರಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಆರ್ಥಿಕ ನೆರವು ಒದಗಿಸಲಾಗುವುದು. ದೇಶದಲ್ಲಿ 70 ಮಿಲಿಯ ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿಯನ್ನು ವ್ಯವಸ್ಥೆಗೊಳಿಸುವ ಸಾಮರ್ಥ್ಯವಿದ್ದರೂ ಈಗ 10 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸೂಕ್ಷ್ಮ ನೀರಾವರಿ ವ್ಯವಸ್ಥೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಮಂತ್ರಿ ಕೃಷಿ ಸಂಚಯಿ ಯೋಜನೆ(ಪಿಎಂಕೆಎಸ್‌ವೈ)ಯ ಕಾರ್ಯಗಳಿಗೆ ಪೂರಕವಾಗಿ ಎಂಐಎಫ್‌ನ ಮೀಸಲು ನಿಧಿಯನ್ನು ಬಳಸುವುದರಿಂದ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿಯಡಿ ತರಲು ಸಹಕಾರಿಯಾಗಲಿದೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

14ನೇ ಹಣಕಾಸು ಆಯೋಗದ ಉಳಿದಿರುವ ಅವಧಿಯಲ್ಲಿ , ವರ್ಷಕ್ಕೆ ಎರಡು ಮಿಲಿಯನ್ ಹೆಕ್ಟೇರ್ ಪ್ರದೇಶದ ಗುರಿ ಸಾಧಿಸುವ ಉಪಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ರಾಜ್ಯ ಸರಕಾರಗಳಿಗೆ ಎಂಐಎಫ್ ಮೀಸಲು ನಿಧಿ ನೆರವಾಗಲಿದೆ. ಸರಕಾರಿ- ಸಾರ್ವಜನಿಕ ಸಹಭಾಗಿತ್ವದ ಯೋಜನೆಯ ರೀತಿಯಲ್ಲಿ ನವೀನ ಸಮಗ್ರ ಯೋಜನೆಗಳ ಅನುಷ್ಠಾನಕ್ಕೆ ಈ ನಿಧಿಯನ್ನು ರಾಜ್ಯಗಳು ಬಳಸಿಕೊಳ್ಳಬಹುದಾಗಿದೆ.

 ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಕ್ಷಣಾ ಪಡೆಗಳ ಬಳಕೆಗಾಗಿ ಪರ್ಯಾಯ ಸಂವಹನಾ ಜಾಲವೊಂದನ್ನು ಅಳವಡಿಸುವ ಯೋಜನೆಗೆ ಆರ್ಥಿಕ ಅನುದಾನವನ್ನು ದ್ವಿಗುಣಗೊಳಿಸಿ 24,664 ಕೋಟಿ ರೂ.ಗೆ ಹೆಚ್ಚಿಸಿದೆ. ತರಂಗ ಜಾಲ ಯೋಜನೆ(ಎನ್‌ಎಫ್‌ಎಸ್)ಯ ನಿಧಿಯನ್ನು 11,330 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು ಈ ಯೋಜನೆಯನ್ನು ಬಿಎಸ್‌ಎನ್‌ಎಲ್ 24 ತಿಂಗಳೊಳಗೆ ಅನುಷ್ಠಾನಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News