ಹವಾಯಿ ಜ್ವಾಲಾಮುಖಿ: 9 ಕಿಲೋಮೀಟರ್ ಎತ್ತರಕ್ಕೆ ಚಿಮ್ಮಿದ ಜ್ವಾಲೆ!

Update: 2018-05-18 04:46 GMT

ಹವಾಯಿ, ಮೇ 18: ಹವಾಯಿಯ ಕಿಲವ್ಯಾ ಜ್ವಾಲಾಮುಖಿ ಗುರುವಾರ ಮುಂಜಾನೆ ಮತ್ತೆ ಸ್ಫೋಟಿಸಿದ್ದು, ನೂರಾರು ಅಡಿ ಎತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಿಮ್ಮಿದೆ. ಆಗಸದಲ್ಲಿ 30 ಸಾವಿರ ಅಡಿ ಎತ್ತರಕ್ಕೆ ಜ್ವಾಲಾಮುಖಿಯ ಬೂದಿ ಹಾರಿದೆ.

ಹವಾಯಿ ಜ್ವಾಲಾಮುಖಿ ವೀಕ್ಷಣಾಲಯದ ವೆಬ್‌ ಕ್ಯಾಮೆರಾದಲ್ಲಿ ಈ ಜ್ವಾಲಾಮುಖಿಯ ಪರಿಣಾಮವನ್ನು ಸೆರೆಹಿಡಿಯಲಾಗಿದ್ದು, ಧೂಳುಯುಕ್ತ ಬೂದಿಯ ಮಳೆ ಈಗಾಗಲೇ ಕಪ್ಪುಗಟ್ಟಿರುವ ದೃಶ್ಯಾವಳಿಯ ಮೇಲೆ ಆಗುತ್ತಿರುವುದನ್ನು ಇದು ಚಿತ್ರಿಸಿದೆ. ಬೆಂಕಿಯ ಜ್ವಾಲೆ ಒಂಬತ್ತು ಕಿಲೋ ಮೀಟರ್ ಎತ್ತರಕ್ಕೆ ವ್ಯಾಪಿಸಿರುವುದು ಕಂಡುಬಂದಿದೆ.

ಮೌನಾ ಲಾವೊ ಜ್ವಾಲಾಮುಖಿಯ ಶೃಂಗದಿಂದ ಸುಮಾರು 20 ಮೈಲಿ ದೂರದಲ್ಲಿ ಈ ಫೋಟೊ ಸೆರೆಹಿಡಿಯಲಾಗಿದ್ದು, ಆಗಸದೆತ್ತರಕ್ಕೆ ಬೆಂಕಿ ಚಿಮ್ಮುವುದು ಕಂಡುಬಂದಿದೆ.

ಅಮೆರಿಕದ ಜಿಯೋಲಾಜಿಕಲ್ ಸರ್ವೆ ವಿಜ್ಞಾನಿ ಮೈಕೆಲ್ ಕೂಂಬ್ಸ್ ಹೇಳುವಂತೆ ಮತ್ತೆ ಇಷ್ಟೇ ದೊಡ್ಡ ಪ್ರಮಾಣದ ಜ್ವಾಲಾಮುಖಿ ಚಿಮ್ಮುವ ಸಾಧ್ಯತೆ ಇದೆ. ಈಗಾಗಲೇ ಸಂಭವಿಸಿರುವ ಜ್ವಾಲಾಮುಖಿಯ ಲಾವಾರಸ ಮತ್ತೆ ನೆಲದೊಳಕ್ಕೆ ಸೇರುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ಇನ್ನಷ್ಟು ದೊಡ್ಡ ಜ್ವಾಲಾಮುಖಿಗೆ ಅವಕಾಶ ಮಾಡಿಕೊಡಲಿದೆ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಮುಳುಗುತ್ತಿರುವ ಜ್ವಾಲಾಮುಖಿ ಶಿಲೆ ಅಂತರ್ಜಲದೊಂದಿಗೆ ಸೇರಿದಾಗ ಒತ್ತಡ ಮತ್ತಷ್ಟು ಹೆಚ್ಚಿ ಅದು ಮೇಲ್ಮುಖವಾಗಿ ಚಿಮ್ಮುವ ಸಾಧ್ಯತೆ ಹೆಚ್ಚು. ಇದರಿಂದಾಗಿ ದೊಡ್ಡ ಗಾತ್ರದ ಬಂಡೆ ಹಾಗೂ ಬೂದಿ ಹೊರಚಿಮ್ಮಲಿದೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News