ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸ ಮತಯಾಚನೆ: ಸುಪ್ರೀಂ ಕೋರ್ಟ್ ಆದೇಶ

Update: 2018-05-18 10:45 GMT

ಹೊಸದಿಲ್ಲಿ, ಮೇ 18: ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತಯಾಚನೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈಗಾಗಲೇ ನ್ಯಾಯಾಧೀಶರು ಮೌಖಿಕ ಆದೇಶ ನೀಡಿದ್ದು, ಲಿಖಿತ ಆದೇಶ ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಲಿದೆ.

 ಕರ್ನಾಟಕದಲ್ಲಿ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಮುಂದುವರಿಸಿದ ಸುಪ್ರೀಂಕೋರ್ಟ್‌ನ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ವಿಶ್ವಾಸ ಮತಯಾಚನೆಗೆ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಒಂದೆರಡು ದಿನ ನೀಡಿರುವ ಉದಾಹರಣೆಯಿದೆ. ನಾಳೆಯೇ ವಿಶ್ವಾಸ ಮತ ಯಾಚನೆ ಮಾಡಬೇಕು ಎಂದು  ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ.

ನಾಳೆಯೇ ವಿಶ್ವಾಸ ಮತ ಯಾಚನೆಗೆ ಸಿದ್ಧ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು. ಕೇಂದ್ರದ ಪರ ವಕೀಲ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ನಾಳೆಯೇ ವಿಶ್ವಾಸ ಮತ ಯಾಚನೆಗೆ ವಿರೋಧ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್‌ನ ತೀರ್ಪಿನ ಮುಖ್ಯಾಂಶಗಳು

*ನಾಳೆ ಸಂಜೆ 4 ಗಂಟೆಗೆ ಮೊದಲು ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಬೇಕು. ಶಾಸಕರ ಪ್ರಮಾಣವಚನ ಬಳಿಕ ಹಂಗಾಮಿ ಸ್ಪೀಕರ್ ಆಯ್ಕೆ.

* ಗೌಪ್ಯ ಮತದಾನದ ಕೋರಿಕೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

*ಸದನದ ನಿಯಮದ ಪ್ರಕಾರ ವಿಶ್ವಾಸ ಮತ ನಡೆಯಬೇಕು. ಯಡಿಯೂರಪ್ಪ ಯಾವುದೇ ಪ್ರಮುಖ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ ಹಾಗೂ ಯಾವುದೇ ಆದೇಶ ನೀಡುವಂತಿಲ್ಲ.

*ಹಂಗಾಮಿ ಸ್ಪೀಕರ್ ವಿಶ್ವಾಸಮತ ಯಾಚನೆ ಹೇಗೆ ನಡೆಸಬೇಕು ಎಂದು ನಿರ್ಧರಿಸಬೇಕು.

*ಕಾಂಗ್ರೆಸ್ ಮತ್ತು ಜೆಡಿಎಸ್ ನೀಡಿದ ಶಾಸಕರ ಪಟ್ಟಿ ರಾಜ್ಯಪಾಲರಿಗೆ ಸಂಶಯ ಇತ್ತು ಎನ್ನುವ ಕೋರ್ಟಿನಲ್ಲಿ ರೋಹ್ಟಗಿ ಹೇಳಿಕೆಗೆ,ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಸಂಶಯ ಇದ್ದರೆ ತನಗೆ ನೀಡಿದ ಪಟ್ಟಿಯ ಬಗ್ಗೆ ರಾಜ್ಯ ಭವನದಲ್ಲಿಯೇ ರಾಜ್ಯಪಾಲರು ಸಂಶಯ ನಿವಾರಿಸಿ ಕೊಳ್ಳಬೇಕಿತ್ತು ಹೊರತು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಎತ್ತುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿತು.

"ಸುಪ್ರೀಂಕೋರ್ಟ್ ಐತಿಹಾಸಿಕ ಮಧ್ಯಂತರ ಆದೇಶ ನೀಡಿದೆ. ನಾಳೆ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆಗೆ ಆದೇಶ ನೀಡಿದೆ. ಯಡಿಯೂರಪ್ಪ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಿದೆ. ಹಂಗಾಮಿ ಸ್ಪೀಕರ್ ಆಯ್ಕೆ, ಶಾಸಕರ ಪ್ರಮಾಣವಚನಕ್ಕೆ ಆದೇಶ ನೀಡಿದೆ''

ಅಭಿಷೇಕ್ ಸಿಂಘ್ವಿ, ಕಾಂಗ್ರೆಸ್ ಪರ ವಕೀಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News