ಗೋಹತ್ಯೆ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಬಂಧನ: ಆದಿತ್ಯನಾಥ್ ಸರಕಾರಕ್ಕೆ ಹಕ್ಕು ಆಯೋಗದ ನೋಟಿಸ್

Update: 2018-05-18 06:28 GMT

ಹೊಸದಿಲ್ಲಿ, ಮೇ 18: ಶಂಕಿತ ಗೋಹತ್ಯೆ ಪ್ರಕರಣವೊಂದರ ಸಂಬಂಧ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬಾಲಾಪರಾಧಿಗಳ ಆಶ್ರಯತಾಣಕ್ಕೆ ಕಳುಹಿಸುವ ಬದಲು ಜೈಲಿನಲ್ಲಿರಿಸಿದ ಘಟನೆ ಉತ್ತರ ಪ್ರದೇಶದ ಮುಝಫ್ಫರನಗರ ಜಿಲ್ಲೆಯಲ್ಲಿ ನಡೆದಿದೆ ಎಂಬ ಮಾಧ್ಯಮ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಇಬ್ಬರು ಆರೋಪಿ ಬಾಲಕಿಯರು 17 ಹಾಗೂ 13 ವರ್ಷ ವಯಸ್ಸಿನವರಾಗಿದ್ದು, ಮೂರೂವರೆ ತಿಂಗಳು ಜೈಲು ವಾಸದ ನಂತರವಷ್ಟೇ ಅವರನ್ನು ಬಿಡುಗಡೆಗೊಳಿಸಲಾಗಿತ್ತು.

ಅಲಹಾಬಾದ್ ಹೈಕೋರ್ಟ್ ಅವರಿಗೆ ಮಾರ್ಚ್ 27ರಂದು ಜಾಮೀನು ನೀಡಿದ್ದರೆ ಎಪ್ರಿಲ್ 7ರಂದು ಬಿಡುಗಡೆಗೊಳಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವೊಂದು ಅವರ ಜಾಮೀನು ಅರ್ಜಿ ನಿರಾಕರಿಸಿದ ನಂತರ ಬಾಲಕಿಯರ ಕುಟುಂಬ ಹೈಕೋರ್ಟಿಗೆ ಮೊರೆ ಹೋಗಿತ್ತು.

ಈ ಘಟನೆಯ ಬಗೆಗಿನ ಪತ್ರಿಕಾ ವರದಿಗಳು ನಿಜವೇ ಆಗಿದ್ದರೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.

ಬಾಲಕಿಯರನ್ನು ಕಳೆದ ವರ್ಷದ ಡಿಸೆಂಬರ್ 29ರಂದು ಮುಝಫ್ಫರನಗರ ಜಿಲ್ಲೆಯ ಖತೌಲಿ ಎಂಬಲ್ಲಿನ ವಖೀಲ್ ಕಿ ಡೈರಿ ಎಂಬಲ್ಲಿ ದಾಳಿ ನಡೆದ ನಂತರ ಅವರ ತಾಯಿ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಸಹಿತ ನಾಲ್ವರು ಸಂಬಂಧಿಕರೊಂದಿಗೆ ಬಂಧಿಸಲಾಗಿತ್ತು. ಸ್ಥಳದಲ್ಲಿ ಹತ್ತು ಕ್ವಿಂಟಾಲ್ ಮಾಂಸ ಹಾಗೂ ದನದ ಚರ್ಮ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಾಲಕಿಯರ ತಂದೆ ದಾಳಿ ನಡೆದಾಗ ಪರಾರಿಯಾಗಿದ್ದ. ಬಾಲಕಿಯರ ವಯಸ್ಸು ಕ್ರಮವಾಗಿ 17 ಹಾಗೂ 13 ಆಗಿದ್ದರೂ ಪೊಲೀಸರು ಎಫ್‌ಐಆರ್ ನಲ್ಲಿ 21 ಹಾಗೂ 19 ಎಂದು ನಮೂದಿಸಿದ್ದರೆಂದು ಆರೋಪಿಸಲಾಗಿದೆ.

ಪ್ರಕರಣದ ಇತರ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಬಾಲಕಿಯರ ತಂದೆ ನಸೀಮುದ್ದೀನ್ ಪ್ರಕರಣದ ನಂತರ ಶರಣಾಗತನಾಗಿದ್ದು, ಆತ ಕೂಡ ಬಂಧನದಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News