ಪೂರ್ಣಗಿರಿ ದೇವಳಕ್ಕೆ ಹೊರಟಿದ್ದ ಯಾತ್ರಾರ್ಥಿಗಳಿಗೆ ಟ್ರಕ್ ಢಿಕ್ಕಿ: ಕನಿಷ್ಠ 9 ಸಾವು, ಹಲವರಿಗೆ ಗಾಯ

Update: 2018-05-18 08:38 GMT

ಲಕ್ನೋ, ಮೇ 18: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅತಿ ವೇಗದಿಂದ ಸಾಗುತ್ತಿದ್ದ ಮಿನಿ ಟ್ರಕ್ ಒಂದು ಪೂರ್ಣಗಿರಿಗೆ ಹೊರಟಿದ್ದ ಯಾತ್ರಾರ್ಥಿಗಳ ಗುಂಪೊಂದರ ಮೇಲೆ ಹರಿದ ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಸುಮಾರು 250 ಯಾತ್ರಾರ್ಥಿಗಳಿದ್ದ ತಂಡವೊಂದು ಬರಿಗಾಲಲ್ಲಿ ಮಾ ಪೂರ್ಣಗಿರಿ ದೇವಳದತ್ತ ತೆರಳುತ್ತಿದ್ದಾಗ ಘಟನೆ ನಡೆದಿದೆ. ಈ ದೇವಳ ನೇಪಾಳದ ಗಡಿ ಸಮೀಪವಿದೆ. ಮಿನಿ ಟ್ರಿಕ್ ಸೀತರಗಂಜ್ ಪ್ರದೇಶದಿಂದ ಆಗಮಿಸಿದ್ದು, ಮಾರಾಟ ತೆರಿಗೆ ಕಚೇರಿ ಬಳಿ ಯಾತ್ರಾರ್ಥಿಗಳಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಮಾರು 21ಕ್ಕೂ ಅಧಿಕ ಮಂದಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಐದು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯೂ ಕೈಜೋಡಿಸಿದೆ. ಸಣ್ಣಪುಟ್ಟ ಗಾಯಗೊಂಡ ಯಾತ್ರಾರ್ಥಿಗಳನ್ನು ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಅವರವರ ಮನೆಗಳಿಗೆ ಕಳುಹಿಸಿ ಕೊಡಲಾಗಿದೆ.  ಘಟನೆ ನಡೆದ ಕೂಡಲೇ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಉತ್ತರಾಖಂಡದ ತಾನಕ್ಪುರದಲ್ಲಿ ಸಮುದ್ರ ಮಟ್ಟಕ್ಕಿಂತ 2,000 ಮೀಟರ್ ಎತ್ತರದಲ್ಲಿರುವ ಪರ್ವತವೊಂದರಲ್ಲಿ ಮಾ ಪೂರ್ಣಗಿರಿ ದೇವಳವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News