"ನನ್ನ ಬಳಿ 116 ಮಂದಿ ಇದ್ದಾರೆ, ನನ್ನನ್ನು ಸಿಎಂ ಮಾಡಿ''

Update: 2018-05-18 09:30 GMT

ಹೊಸದಿಲ್ಲಿ, ಮೇ 18: ಯಾವುದೇ ರಾಜಕೀಯ ಬೆಳವಣಿಗೆಯಾಗಲಿ, ಸಾಮಾಜಿಕ ಜಾಲತಾಣಗಳಲ್ಲಿ ಆ ಬಗ್ಗೆ ಹಾಸ್ಯದ ಕೊರತೆಯೇನಿರುವುದಿಲ್ಲ. ಕರ್ನಾಟಕ ರಾಜಕೀಯದ ಹೈ ಡ್ರಾಮಾ ವಿಚಾರದಲ್ಲೂ ಇದು ನಿಜ. ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಇಂತಹ ಒಂದು ಹಾಸ್ಯ ಕೂಡ ಎಲ್ಲರ ಮೊಗದಲ್ಲಿ ನಗು ಮೂಡಿಸಿದೆ.

ಯಡ್ಡಿಯೂರಪ್ಪರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ನೀಡಿದ ಆದೇಶವನ್ನು ಖಂಡಿಸಿ ಕಾಂಗ್ರೆಸ್ ದಾಖಲಿಸಿರುವ ಅಪೀಲಿನ ಮೇಲಿನ ವಿಚಾರಣೆ ನಡೆಸುತ್ತಿದ್ದ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿರುವ ಜಸ್ಟಿಸ್ ಎ.ಕೆ. ಸಿಕ್ರಿ  ಅತ್ಯಂತ ಗಂಭೀರತೆಯಿಂದ ನಡೆಯುತ್ತಿದ್ದ ವಾದವಿವಾದಗಳ ನಂತರ ಒಂದು  ವಾಟ್ಸ್ಯಾಪ್ ಸಂದೇಶವನ್ನು ಉಲ್ಲೇಖಿಸಿ ವಾತಾವರಣವನ್ನು ತಿಳಿಯಾಗಿಸಲು ಯತ್ನಿಸಿದರು.

"ಹೋಟೆಲ್ ಮಾಲಕ ತನ್ನ ಬಳಿ 116 ಶಾಸಕರಿದ್ದಾರೆ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ವಾಟ್ಸ್ಯಾಪ್ ಸಂದೇಶ ನಮಗೆ ಬರುತ್ತಿದೆ'' ಎಂದರು.

ಈ ಜೋಕ್ ಹೀಗಿದೆ

"ಹಲೋ, ಇದು ರಾಜ್ಯಪಾಲರ ಕಚೇರಿ ಅಲ್ಲವೇನು ?''

"ಹೌದು"

"ನನ್ನ ಬಳಿ 116 ಶಾಸಕರಿದ್ದಾರೆ. ನನ್ನನ್ನು ಸಿಎಂ ಮಾಡುತ್ತೀರೇನು?''

"ಯಾರಿದು ?"

"ಶಾಸಕರನ್ನು ಅಡಗಿಸಿಡಲಾದ ಹೋಟೆಲ್ ಮಾಲಕ ನಾನು.''...

ಬಿಜೆಪಿಗರು ಆಮಿಷವೊಡ್ಡದಂತೆ ತಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಇರಿಸಿದ್ದ ಈಗಲ್ ಟನ್ ರಿಸಾರ್ಟ್ ವಿಚಾರವಾಗಿ ಈ ಜೋಕ್ ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿದೆ.  ಇದೇ ಜೋಕನ್ನು ಹೇಳಿದ ನ್ಯಾಯಾಧೀಶರು ನ್ಯಾಯಾಲಯವನ್ನು ಒಂದು ಕ್ಷಣ ನಗೆಗಡಲಲ್ಲಿ ತೇಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News