ಕಾರ್ತಿ ಚಿದಂಬರಂ ವಿದೇಶ ಪ್ರಯಾಣಕ್ಕೆ ಸುಪ್ರೀಂ ಅಸ್ತು
ಹೊಸದಿಲ್ಲಿ,ಮೇ 18: ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಮೇ 19ರಿಂದ 27ರವರೆಗೆ ಬ್ರಿಟನ್,ಜರ್ಮನಿ ಮತ್ತು ಸ್ಪೇನ್‌ಗಳಿಗೆ ಪ್ರಯಾಣಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಷರತ್ತುಬದ್ಧ ಅನುಮತಿಯನ್ನು ನೀಡಿತು.
ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖೆಯನ್ನೆದುರಿಸುತ್ತಿರುವ ಕಾರ್ತಿ ವಿದೇಶಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಬಾರದು ಅಥವಾ ಮುಚ್ಚಬಾರದು ಎನ್ನುವುದು ಈ ಷರತ್ತುಗಳಲ್ಲಿ ಸೇರಿದೆ.
ವಿದೇಶಗಳಲ್ಲಿ ಯಾವುದೇ ಆಸ್ತಿ ವಹಿವಾಟುಗಳನ್ನು ನಡೆಸದಂತೆಯೂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಕಾರ್ತಿಗೆ ಸೂಚಿಸಿತು.
ಕಾರ್ತಿ ವಿದೇಶ ಪ್ರಯಾಣಕ್ಕೆ ತಾನು ನೀಡಿರುವ ಅನುಮತಿಯನ್ನು ಇತರ ಯಾವುದೇ ಅಪರಾಧ ಪ್ರಕರಣಗಳಲ್ಲಿ ಯಾವುದೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಳ್ಳಲು ಬಳಸಿಕೊಳ್ಳುವಂತಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ತನಿಖೆಗೆ ಸಹಕರಿಸುವಂತೆ ಮತ್ತು ವಿದೇಶದಿಂದ ಮರಳಿದ ಬಳಿಕ ತನ್ನ ಪಾಸ್‌ಪೋರ್ಟ್‌ನ್ನು ತನಿಖಾ ಸಂಸ್ಥೆಗೆ ಒಪ್ಪಿಸುವಂತೆಯೂ ಅದು ಕಾರ್ತಿ ಚಿದಂಬರಂ ಅವರಿಗೆ ಆದೇಶಿಸಿತು.