ಕ್ಯೂಬಾ ವಿಮಾನ ಪತನ: 100ಕ್ಕೂ ಹೆಚ್ಚು ಮಂದಿ ಮೃತ್ಯು

Update: 2018-05-19 03:49 GMT

ಹವಾನ, ಮೇ 19: ಕ್ಯೂಬಾದ ರಾಜಧಾನಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಇಲ್ಲಿನ ಜೋಸ್ ಮರ್ತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿ ಭೂಮಿಗೆ ಅಪ್ಪಳಿಸಿತು. ನೋಡನೋಡುತ್ತಿದ್ದಂತೆ ವಿಮಾನ ಭಸ್ಮವಾಯಿತು ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ವಿಮಾನದಲ್ಲಿ 110 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ವಿಮಾನ ನಿಲ್ದಾಣದ ರನ್‌ವೇ ತುದಿಯ ಅನತಿ ದೂರದಲ್ಲಿ ವಿಮಾನ ಭೂಮಿಗೆ ಅಪ್ಪಳಿಸಿದ್ದು, ಕಳೆದ ಮೂರು ದಶಕಗಳಲ್ಲಿ ಕ್ಯೂಬಾದಲ್ಲಿ ನಡೆದ ಭೀಕರ ಅಪಘಾತ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

39 ವರ್ಷ ಹಳೆಯ ಬೋಯಿಂಗ್ 737 ವಿಮಾನ, ಪೂರ್ವ ಕ್ಯೂಬಾದ ನಗರವಾದ ಹೊಲಿಗ್ಯುನ್‌ಗೆ ಹೊರಟಿತ್ತು. ವಿಮಾನದಲ್ಲಿದ್ದ ಮೂವರು ಪವಾಡಸದೃಶವಾಗಿ ಬದುಕಿ ಉಳಿದಿದ್ದು, ತೀವ್ರ ಗಾಯಗೊಂಡಿರುವ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ನಿಲ್ದಾಣದ ಬಳಿಯೇ ಅಪಘಾತ ಸಂಭವಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಆ ವೇಳೆಗಾಗಲೇ ವಿಮಾನದ ಅವಶೇಷ ಮಾತ್ರ ಉಳಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹಲವು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದು, ಬೆಂಕಿಯನ್ನು ಆರಿಸಲಾಗಿದೆ. ಪರಿಹಾರ ಕಾರ್ಯ ಬಿರುಸಿನಿಂದ ಸಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧ್ಯಕ್ಷ ಮಿಗ್ಯುಯೆಲ್ ಡಯಾಸ್ ಕ್ಯಾನೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News