ವಿಶ್ವ ಪರ್ಯಟನೆ ಮುಗಿಸಿದ ನೌಕಾಪಡೆ ಮಹಿಳಾ ಯೋಧರು
ತಾರಿಣಿ, ಮೇ 19: ಎಂಟು ತಿಂಗಳ ಕಾಲ ನೌಕೆಯಲ್ಲಿ ಇಡೀ ವಿಶ್ವವನ್ನು ಸುತ್ತಿಕೊಂಡು ಬಂದ ಆರು ಮಂದಿ ನೌಕಾಪಡೆಯ ಮಹಿಳಾ ಅಧಿಕಾರಿಗಳ ತಂಡ ಗೋವಾಗೆ ಆಗಮಿಸಿದೆ. ವಿಶ್ವದ ಐದು ಪ್ರಮುಖ ಬಂದರುಗಳಲ್ಲಿ ನಿಲುಗಡೆ ಮಾಡಿದ್ದ ಐಎನ್‌ಎಸ್‌ವಿ ತಾರಿಣಿ ತನ್ನ ಯಶಸ್ವಿ ಪಯಣವನ್ನು ಗೋವಾದಲ್ಲಿ ಮುಕ್ತಾಗೊಳಿಸಿತು.
ನಾವಿಕ ಸಾಗರ ಪರಿಕ್ರಮದ ನೇತೃತ್ವವನ್ನು ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶ ವಹಿಸಿದ್ದರು. ಇದು ಮಹಿಳಾ ಯೋಧರೇ ಕೈಗೊಂಡ ಮೊಟ್ಟಮೊದಲ ವಿಶ್ವ ಪರ್ಯಟನೆಯಾಗಿದೆ. 21,600 ನಾಟಿಕಲ್ ಮೈಲು ದೂರವನ್ನು ಕ್ರಮಿಸಿದ ಈ ತಂಡ ಕಳೆದ ಸೆಪ್ಟೆಂಬರ್ 10ರಂದು ಗೋವಾದಿಂದ ಹೊರಟಿತ್ತು. ಭಾರತವೇ ನಿರ್ಮಿಸಿದ ನೌಕೆ ಐಎನ್‌ಎಸ್‌ವಿ ತಾರಿಣಿ, ಐದು ದೇಶಗಳಿಗೆ ಭೇಟಿ ನೀಡಿದ್ದು, ಸಮಭಾಜಕ ವೃತ್ತವನ್ನು ಎರಡು ಬಾರಿ ದಾಟಿ ಹೋಗಿದೆ. ನಾಲ್ಕು ಖಂಡಗಳು ಮತ್ತು ಮೂರು ಸಾಗರಗಳನ್ನು ಕ್ರಮಿಸಿ, ಮೂರು ಭೂಶಿರಗಳಾದ ಲೀಯುವಿನ್, ಹಾರ್ನ್ ಮತ್ತು ಗುಡ್‌ಹೋಪ್‌ಗಳ ದಕ್ಷಿಣದಲ್ಲಿ ಪ್ರಯಾಣಿಸಿದೆ.
"ಇದು ಮನುಕುಲಕ್ಕೇ ದೊಡ್ಡ ಸವಾಲು. ಸಮುದ್ರದ ವಿಭಿನ್ನ ಪರಿಸ್ಥಿತಿಯಲ್ಲಿ ಯಾನ ಕೈಗೊಂಡು ಪೂರ್ಣಗೊಳಿಸುವುದು ನಿಜಕ್ಕೂ ರೋಚಕ ಅನುಭವ" ಎಂದು ನೌಕಾಪಡೆ ವಕ್ತಾರ ಕ್ಯಾಪ್ಟನ್ ಡಿ.ಕೆ.ಶರ್ಮಾ ಹೇಳಿದ್ದಾರೆ. ನೌಕೆಯ ಸಿಬ್ಬಂದಿಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಾಮ್‌ವಾಲ್ ಮತ್ತು ಪಿ.ಸ್ವಾತಿ, ಲೆಫ್ಟಿನೆಂಟ್‌ಗಳಾದ ಐಶ್ವರ್ಯ ಬೊದ್ದಪಟ್ಟಿ, ಎಸ್.ವಿಜಯಾದೇವಿ ಮತ್ತು ಪಾಯಲ್ ಗುಪ್ತಾ ಸೇರಿದ್ದರು.
ಈ ಪರಿಕ್ರಮವನ್ನು ಆರು ಹಂತಗಳಲ್ಲಿ ಕೈಗೊಳ್ಳಲಾಗಿದ್ದು, ಫ್ರೆಮೆಂಟಲ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕ್‌ಲ್ಯಾಂಡ್, ದಕ್ಷಿಣ ಆಫ್ರಿಕಾ ಹಾಗೂ ಮರೀಷಿಯಸ್‌ನಲ್ಲಿ ತಂಗಿತ್ತು. ಈ ಮಹಿಳಾ ತಂಡವನ್ನು ಕ್ಯಾಪ್ಟನ್ ದಿಲೀಪ್ ದೋಂಡೆ ನೇತೃತ್ವದಲ್ಲಿ ತರಬೇತುಗೊಳಿಸಲಾಗಿತ್ತು.