ಹಂಗಾಮಿ ಸ್ಪೀಕರ್ ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾ

Update: 2018-05-19 17:43 GMT

ಹೊಸದಿಲ್ಲಿ, ಮೇ 19: ಕರ್ನಾಟಕ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಶಾಸಕ ಕೆ.ಜಿ.ಬೋಪಯ್ಯರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್- ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಹಂಗಾಮಿ ಸ್ಪೀಕರ್ ಆಗಿ ಅತೀ ಹಿರಿಯ ಶಾಸಕರನ್ನು ನೇಮಿಸುವ ಸಂಪ್ರದಾಯವಿದೆ ಎಂಬ ಕಾಂಗ್ರೆಸ್- ಜೆಡಿಎಸ್ ವಾದವನ್ನು ಒಪ್ಪದ ಸುಪ್ರೀಂಕೋರ್ಟ್, ಸಂಪ್ರದಾಯವನ್ನು ನಿಯಮ ಎಂದು ಪರಿಗಣಿಸುವಂತಿಲ್ಲ ಹಾಗೂ ಸಂಪ್ರದಾಯ ಪಾಲಿಸಲೇಬೇಕು ಎಂದು ರಾಜ್ಯಪಾಲರನ್ನು ಕಟ್ಟುನಿಟ್ಟು ಮಾಡುವಂತಿಲ್ಲ ಎಂದು ತಿಳಿಸಿತು. 14ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಬಾಳಸಾಹೇಬ್ ವಿಖೆ ಪಾಟೀಲ್‌ರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದ್ದ ಘಟನೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಬಹುಷಃ ಆಗ ಕಾಂಗ್ರೆಸಿನವರೇ ಆದ ಸಿಸ್‌ರಾಮ್ ಓಲ ಸದನದ ಅತ್ಯಂತ ಹಿರಿಯ ಸದಸ್ಯರಾಗಿದ್ದರು . ಇದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ ಎಂದು ಜೆಡಿಎಸ್ ಪರ ವಕೀಲರಾದ ಕಪಿಲ್ ಸಿಬಲ್‌ಗೆ ತಿಳಿಸಿತು.

 ಹಂಗಾಮಿ ಸ್ಪೀಕರ್ ಬೋಪಯ್ಯ ವಿರುದ್ಧ ಕಾಂಗ್ರೆಸ್- ಜೆಡಿಎಸ್ ಕೂಟವು ಆಕ್ಷೇಪ ವ್ಯಕ್ತಪಡಿಸುವುದಾದರೆ ಆಗ ಬೋಪಯ್ಯ ಅವರ ವಾದವನ್ನೂ ಆಲಿಸಬೇಕಾಗುತ್ತದೆ ಮತ್ತು ಸದನದಲ್ಲಿ ಶನಿವಾರ ನಿಗದಿಯಾಗಿರುವ ಬಹುಮತ ಪರೀಕ್ಷೆಯನ್ನು ಮುಂದೂಡಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎಸ್.ಎ.ಬೊಡ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು. ಆದರೆ ಬೋಪಯ್ಯರನ್ನು ನೇಮಕಗೊಳಿಸಿದ ರಾಜ್ಯಪಾಲರ ಕ್ರಮವನ್ನು ರದ್ದುಪಡಿಸಬೇಕೆಂಬ ಬಗ್ಗೆ ಹೆಚ್ಚಿನ ವಾದಮಂಡಿಸಲು ಹಿರಿಯ ವಕೀಲರಾದ ಸಿಬಲ್, ಎ.ಎಂ.ಸಿಂಘ್ವಿ ಹಾಗೂ ಅವರ ಸಹೋದ್ಯೋಗಿಗಳು ಆಸಕ್ತಿ ತೋರಲಿಲ್ಲ. ಈ ಸಂದರ್ಭ ಅಭಿಪ್ರಾಯ ಮಂಡಿಸಿದ ಯಡಿಯೂರಪ್ಪ ಪರ ವಕೀಲ ಮುಕುಲ್ ರೋಹಟ್ಗಿ, ಕಾಂಗ್ರೆಸ್-ಜೆಡಿಎಸ್ ಅರ್ಜಿ ಕೇವಲ ರಾಜಕೀಯ ಸ್ಟಂಟ್ ಆಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News