×
Ad

ಪ್ರವಾದಿ ಮುಹಮ್ಮದರು ಸಾರಿದ ಸಮಾನತೆ, ಸಹೋದರತ್ವ ವಿಶ್ವವನ್ನು ಮುನ್ನಡೆಸುತ್ತಿದೆ: ಪ್ರಧಾನಿ ಮೋದಿ

Update: 2018-05-19 21:00 IST

ಶ್ರೀನಗರ, ಮೇ 19: ದಾರಿತಪ್ಪಿದ ಯುವಜನರು ಎತ್ತಿಕೊಳ್ಳುವ ಶಸ್ತ್ರಾಸ್ತ್ರ ಹಾಗೂ ಬಿಸಾಡುವ ಒಂದೊಂದು ಕಲ್ಲು ಕೂಡಾ ಜಮ್ಮು ಕಾಶ್ಮೀರ ಹಾಗೂ ದೇಶವನ್ನು ಅಸ್ಥಿರಗೊಳಿಸುತ್ತದೆ ಎಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಸ್ಥಿರತೆಯ ವಾತಾವರಣ ದೂರಗೊಳಿಸಲು ಪ್ರಯತ್ನ ನಡೆಸುವಂತೆ ಯುವಜನತೆಗೆ ಕರೆ ನೀಡಿದ್ದಾರೆ.

ಪವಿತ್ರ ರಮಝಾನ್ ತಿಂಗಳಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ಮೋದಿ, ಕೆಲವು ವಿದೇಶಿ ಶಕ್ತಿಗಳು ರಾಜ್ಯದ ಅಭಿವೃದ್ಧಿಗೆ ವಿರುದ್ಧವಾಗಿವೆ ಎಂದರು. ತಮ್ಮ ಹಾಗೂ ಮುಂದಿನ ತಲೆಮಾರಿನ ಉತ್ತಮ ಭವಿಷ್ಯಕ್ಕಾಗಿ ಯುವಜನತೆ ದೇಶದ ಮತ್ತು ಕಾಶ್ಮೀರದ ಮುಖ್ಯವಾಹಿನಿಯ ಅಭಿವೃದ್ಧಿಯಲ್ಲಿ ಸೇರಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು.

ಕಾಶ್ಮೀರದ ಗುರೆಝ್ ಪ್ರದೇಶದಲ್ಲಿ ಸ್ಥಾಪಿಸಲಾದ 330 ಮೆಗಾವಾಟ್ಸ್ ಸಾಮರ್ಥ್ಯದ ಕಿಶನ್‌ಗಂಗ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ, ಬಳಿಕ ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ಶ್ರೀನಗರ ವರ್ತುಲ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. 42.1 ಕಿ.ಮೀ. ಉದ್ದದ ಈ ರಸ್ತೆ ಪಶ್ಚಿಮ ಶ್ರೀನಗರದ ಗಲಂದರ್ ನಗರವನ್ನು ಬಂಡಿಪೋರ ಜಿಲ್ಲೆಯ ಸಂಬಲ್‌ಗೆ ಜೋಡಿಸುತ್ತದೆ. ಈ ವರ್ತುಲ ರಸ್ತೆಯಿಂದ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ ದೊರೆಯಲಿದೆ ಹಾಗೂ ಕ್ಷಿಪ್ರ ಸಂಚಾರ ಸಾಧ್ಯವಾಗಲಿದೆ. ವಿದ್ಯುತ್ ಯೋಜನೆಯಿಂದ ರಾಜ್ಯವು ಎದುರಿಸುತ್ತಿರುವ ವಿದ್ಯುತ್ ಕೊರತೆಯ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಲಿದೆ. ಸೌಭಾಗ್ಯ ಯೋಜನೆಯಡಿ ಪ್ರತೀ ಮನೆಗೂ ವಿದ್ಯುತ್ ಪೂರೈಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಮೋದಿ ಹೇಳಿದರು. ರಮಝಾನ್ ತಿಂಗಳು ಪ್ರವಾದಿ ಮುಹಮ್ಮದರ ಬೋಧನೆ ಹಾಗೂ ಸಂದೇಶವನ್ನು ಸ್ಮರಿಸಿಕೊಳ್ಳುವ ಸಮಯವಾಗಿದೆ. ಪ್ರವಾದಿಯವರು ಸಾರಿದ ಸಮಾನತೆ ಹಾಗೂ ಸಹೋದರತ್ವದ ಪಾಠವು ದೇಶ ಹಾಗೂ ವಿಶ್ವವನ್ನು ನೈಜ ಅರ್ಥದಲ್ಲಿ ಮುನ್ನಡೆಸುತ್ತದೆ ಎಂದು ಮೋದಿ ಈ ಸಂದರ್ಭ ಹೇಳಿದರು.

  ಪ್ರವಾಸೋದ್ಯಮವು ಜಮ್ಮು ಕಾಶ್ಮೀರದ ಅಭಿವೃದ್ಧಿಯ ಪ್ರಧಾನ ಅಂಶವಾಗಿದೆ. ಆದರೆ ಇಂದಿನ ದಿನದಲ್ಲಿ ಪ್ರವಾಸಿಗರು ಹೆಚ್ಚಿನ ಸೌಕರ್ಯ ಬಯಸುತ್ತಾರೆ. ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ದಟ್ಟಣೆಯಲ್ಲಿ ಸಮಯ ವ್ಯರ್ಥವಾಗುವುದನ್ನು ಅವರು ಸಹಿಸುವುದಿಲ್ಲ ಎಂದ ಪ್ರಧಾನಿ, ಪ್ರವಾಸೋದ್ಯಮದ ಅಭಿವೃದ್ಧಿಗೆ ಅಗತ್ಯವಿರುವ ಆಧುನಿಕ ಪರಿಸರ ವ್ಯವಸ್ಥೆ ಪೂರೈಸುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ . ಇದರಿಂದ ರಾಜ್ಯದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರಕಲಿದೆ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News