ರಸ್ತೆ ಅಪಘಾತದಲ್ಲಿ ಶೇ. 50ರ ಬದಲು ಶೇ. 5 ಜೀವವನ್ನು ಮಾತ್ರ ಉಳಿಸಲು ಸಾಧ್ಯವಾಯಿತು: ನಿತಿನ್ ಗಡ್ಕರಿ

Update: 2018-05-19 16:05 GMT

ಹೊಸದಿಲ್ಲಿ, ಮೇ 19: ರಸ್ತೆ ಅಪಘಾತದಲ್ಲಿ ತನ್ನ ವೈಯುಕ್ತಿಕ ಗುರಿಯ ಶೇ. 50ಕ್ಕಿಂತ ಬದಲಾಗಿ ಶೇ. 5ರಷ್ಟು ಪ್ರಾಣಗಳನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಭೋಪಾಲದಲ್ಲಿ ನ್ಯೂಸ್ ಪಬ್ಲಿಕೇಶ್‌ನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ರಸ್ತೆ ಅಪಘಾತವನ್ನು ನಿಯಂತ್ರಿಸಲು ಲೋಕಸಭೆಯಲ್ಲಿ ಮಂಜೂರಾದ ರಸ್ತೆ ಸುರಕ್ಷಾ ಮಸೂದೆ ರಾಜ್ಯ ಸಭೆಯಲ್ಲಿ ವರ್ಷಗಳಿಂದ ಬಾಕಿ ಇದೆ. ಈ ಮಸೂದೆಯನ್ನು ಪ್ರಸ್ತುತ ಸ್ಥಾಯಿ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದರು. ನನ್ನ ಕಾರ್ಯದರ್ಶಿ ಸಮಿತಿಯನ್ನು 9 ಬಾರಿ ಭೇಟಿಯಾಗಿದ್ದಾರೆ. ಇದರಲ್ಲಿ ಮೂರು ಬಾರಿ ನನ್ನನ್ನು ಕರೆದಿದ್ದಾರೆ. ‘‘ಜನರು ಸಾಯುತ್ತಿರುವುದರಿಂದ ಮಸೂದೆ ಮಂಜೂರು ಮಾಡಲು ನೆರವು ನೀಡಬೇಕೆಂದು ನಾನು ಅವರಲ್ಲಿ ವಿನಂತಿಸಿದ್ದೆ’’ ಎಂದು ನಿರ್ದಿಷ್ಟ ವ್ಯಕ್ತಿಯ ಹೆಸರು ಹೇಳದೆ ಗಡ್ಕರಿ ತಿಳಿಸಿದ್ದಾರೆ.

‘‘ನನಗೆ ಇನ್ನಷ್ಟು ಪ್ರಯತ್ನಿಸಲು ಸಾಧ್ಯವಾಗಲಿಲ್ಲ, ಈಗ ಒಂದು ವರ್ಷ ಕಳೆದಿದೆ, ಇದು ನನ್ನ ಮೇಲಿನ ಕಪ್ಪು ಚುಕ್ಕೆ, ಆದರೆ, ನಾನು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ’’ ಎಂದು ಗಡ್ಕರಿ ಹೇಳಿದ್ದಾರೆ. ಪ್ರತಿವರ್ಷ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಇದರಲ್ಲಿ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಹಾಗೂ 3 ಲಕ್ಷ ಜನರು ಗಾಯಗೊಳ್ಳುತ್ತಿದ್ದಾರೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಈ ವಿಷಯದ ಕುರಿತು ರಾಜಸ್ಥಾನದ ಸಾರಿಗೆ ಸಚಿವ ಯೂನುಸ್ ಖಾನ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ಬಳಿಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಿದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು.

ಆದರೆ, ತಮ್ಮ ಅಧಿಕಾರವನ್ನು ಕಸಿಯುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂಬುದನ್ನು ಅವರು ಅರ್ಥ ಮಾಡಿ ಕೊಳ್ಳಬೇಕು ಎಂದು ಗಡ್ಕರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News