ಎಂಜಿಎನ್‌ಆರ್‌ಇಜಿಎ ಕೂಲಿ ಪಾವತಿ ವಿಳಂಬ ಸ್ವೀಕಾರಾರ್ಹವಲ್ಲ: ಸುಪ್ರೀಂ ಕೋರ್ಟ್

Update: 2018-05-19 17:09 GMT

ಹೊಸದಿಲ್ಲಿ, ಮೇ 19: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿ ಕೂಲಿ ನೀಡಲು ವಿಳಂಬ ಮಾಡುವುದು ಸ್ವೀಕಾರಾರ್ಹವಲ್ಲ ಹಾಗೂ ಕೆಲಸಗಾರರಿಗೆ ಕೂಲಿ ಪಾವತಿ ವಿಳಂಬಕ್ಕೆ ಭ್ರಷ್ಟಾಚಾರ ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.

ಕೂಲಿ ಪಾವತಿಯಲ್ಲಿ ವಿಳಂಬವನ್ನು ಕೇಂದ್ರ ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಕೆಲಸಗಾರರ ಕೂಲಿಯನ್ನು ಕೂಡಲೇ ವರ್ಗಾಯಿಸಬೇಕು. ವಿಫಲವಾದರೆ, ನಿಗದಿಪಡಿಸಿದ ಪರಿಹಾರ ನೀಡಬೇಕು ಎಂದಿದೆ. ಕಾಯ್ದೆ ಪ್ರಕಾರ ಕೆಲಸ ಪೂರ್ಣಗೊಂಡ ಹದಿನೈದು ದಿನಗಳ ಒಳಗೆ ಆಕೆ/ಆತ ತನ್ನ ಬಾಕಿ ಕೂಲಿ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಒಂದು ವೇಳೆ ಯಾವುದೇ ಆಡಳಿತಾತ್ಮಕ ಅದಕ್ಷತೆ ಅಥವಾ ನಿರ್ಲಕ್ಷ ಕಂಡು ಬಂದಲ್ಲಿ ಈ ಸಮಸ್ಯೆ ಪರಿಹರಿಸುವುದು ರಾಜ್ಯ ಸರಕಾರ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಾಯ್ದೆಯ ನಿಯಮಗಳ ಅನುಸರಣೆಯಿಂದ ಉಂಟಾಗುವ ಹೊರೆಯನ್ನು ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರಕಾರ ಹಾಗೂ ಸಂಸ್ಥೆಗಳು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಹಾಗೂ ಎನ್.ವಿ. ರಮಣ ಅವರನ್ನು ಒಳಗೊಂಡ ಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಿ ಕಾರ್ಮಿಕರಿಗೆ ವೇತನ ಹಾಗೂ ಪರಿಹಾರ ನೀಡಲು ತುರ್ತು ಸಮಯ ಮಿತಿ ಕಡ್ಡಾಯ ಕಾರ್ಯಕ್ರಮವನ್ನು ಸಿದ್ಧಗೊಳಿಸಬೇಕು ಎಂದು ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಮೂಲಕ ಕೇಂದ್ರ ಸರಕಾರಕ್ಕೆ ತಿಳಿಸಲಾಗಿದೆ ಎಂದು ಪೀಠ ಹೇಳಿದೆ.

ಕಾಯ್ದೆ ಹಾಗೂ ಅದರ 2ನೇ ಪರಿಚ್ಛೇದದ ಪ್ರಕಾರ ಕೆಲಸ ಮಾಡಿದ ದಿನಾಂಕದಿಂದ 15 ದಿನಗಳ ಒಳಗೆ ವೇತನ ಸ್ವೀಕರಿಸಲು ಕೆಲಗಾರರು ಅರ್ಹರಾಗುತ್ತಾರೆ. ಇದಕ್ಕೆ ವಿಫಲವಾದರೆ ಕಾಯ್ದೆಯ 2ನೇ ಪರಿಚ್ಛೇದ ದ 29ನೇ ಪ್ಯಾರಾದಲ್ಲಿ ವಿವರಿಸಿದಂತೆ ಪರಿಹಾರ ಕೋರಲು ಕೆಲಸಗಾರರು ಅರ್ಹರಾಗುತ್ತಾರೆ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News