ಬಿಜೆಪಿಯು ತನ್ನ ಪ್ರಮಾಣಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಿದೆ: ಬಿ. ರಮಾನಾಥ ರೈ

Update: 2018-05-20 10:21 GMT

ಬಂಟ್ವಾಳ, ಮೇ 20: ಬಿಜೆಪಿಯು ತನ್ನ ಪ್ರಮಾಣಿಕತೆಯ ಬಗ್ಗೆ ಪ್ರಶ್ನೆ ಮಾಡುತ್ತಿದೆ. ಒಂದು ವೇಳೆ ತಾನು ಪ್ರಮಾಣಿಕ ಅಲ್ಲ ಎಂದು ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ರವಿವಾರ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕರ್ತರ ಸಭೆ ಹಾಗೂ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕ್ಷೇತ್ರದ ಜನರ ಅಭಿವೃದ್ಧಿಗಾಗಿ ತಾನು ಶಕ್ತಿ ಮೀರಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ತನಗೆ ತೃಪ್ತಿಯೂ ಇದೆ ಎಂದ ಅವರು, ಬಿಜೆಪಿ ಅವರು ಹಸಿಹಸಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ತನಗೆ ಸೋಲಾಯಿತು. ಅಲ್ಲದೆ, ಬಿಜೆಪಿಯವರು ತನ್ನ ಬಗ್ಗೆ ಹೇಳಿರುವ ವಿಷಯದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದರಿಂದ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದಾಗ ನಾವು ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಿದರು.

ಸುಳ್ಳು ಜ್ವಾಲಾಮುಖಿಯಾಗಿ ಎಷ್ಟೇ ಹರಡಿದರೂ, ಕೊನೆಯಲ್ಲಿ ಸತ್ಯವೇ ಗೆಲ್ಲಲಿದೆ. ಬಿಜೆಪಿ ಅವರ ಅಪ್ರಚಾರದ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಅಲ್ಲದೆ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿಯ ನೈಜ ಮುಖವಾಡವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಇಲ್ಲದಿದ್ದರೆ ಬಿಜೆಪಿಯವರು ಇನ್ನಷ್ಟು ಅಪಪ್ರಚಾರದಲ್ಲಿ ತೊಡಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಹತ್ಯೆಯಲ್ಲಿ ಭಾಗವಹಿಸಿಲ್ಲ. ಜಿಲ್ಲೆಯ ಐದು ಹತ್ಯಾ ಆರೋಪಿಗಳು ರಾಜೇಶ್ ನಾಯ್ಕಾ ಅವರ ಬೆಂಬಲಿಗಾರಗಿದ್ದು, ಅವರ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಿಕೊಂಡಿದ್ದರು. ಯಾರು ಹತ್ಯಾ ರಾಜಕೀಯಕ್ಕೆ ಬೆಂಬಲ ನೀಡುತ್ತಾರೋ, ಅವರು ಸರ್ವ ನಾಶವಾಗಲಿ ಎಂದು ಹೇಳಿದರು.

ಚುನಾವಣೆ ಫಲಿತಾಂಶ ಬಳಿಕ ಬಂಟ್ವಾಳದ ವಿವಿಧೆಡೆ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿವೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಷಡ್ಯಂತರ ಇದೆ. ಧರ್ಮ ಹಾಗೂ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಹಿಂಸಾ ರಾಜಕೀಯ ಮಾಡುತ್ತಿದೆ. ಚುನಾವಣಾ ಸೋಲಿಗೆ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಇವಿಎಂ ಯಾವುದೂ ಕಾರಣವಾಗಿರಬಹುದು. ಮುಂದಿನ ದಿನಗಳಲ್ಲಿ ನಾವು ಒಗ್ಗಟಾಗಿ ಶ್ರಮಿಸಿ ಪಕ್ಷವನ್ನು ಕಟ್ಟೋಣ ಎಂದು ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಾತ್ಕಾಲಿಕ ಸೋಲಾಗಿದೆ. ಮುಂದೆ ವಿಧಾನ ಪರಿಷತ್ ಹಾಗೂ ಲೋಕ ಸಭಾ ಚುನಾವಣೆ ನಡೆಯಲಿದೆ. ಇದಕ್ಕೆ ಒಗ್ಗಟ್ಟಾಗಿ ಕೆಲಸ ಮಾಡಿ ಮತ್ತೆ ಕರಾವಳಿಯಲ್ಲಿ ಪಕ್ಷ ವನ್ನು ಕಟ್ಟೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಹಿರಿಯ ಮುಖಂಡ ಬಿ.ಎಚ್. ಖಾದರ್ ಹಾಗೂ ಕಾಂಗ್ರೆಸ್ ಮುಂಚೂಣಿ ಘಟಕದ ನಾಯಕರು, ಕಾರ್ಯಕರ್ತರು ಹಾಜರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ ವಂದಿಸಿದರು. ರಾಜೀವ ಕಕ್ಯಪದವು ನಿರೂಪಿಸಿದರು. ಸಭೆಯ ನಂತರ ರೈ ಅವರಿಗೆ ಕಾರ್ಯಕರ್ತರು ಬೆಂಬಲ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News