ಮೇ 21: ಮಂಜುನಾಥ್ ಕುಮಾರ್ ನಾಮಪತ್ರ ಸಲ್ಲಿಕೆ

Update: 2018-05-20 10:43 GMT

ಮಂಗಳೂರು, ಮೇ 20:ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಮೇ 21ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೆ ಶಿಕ್ಷಕರೊಬ್ಬರಿಗೆ ಇದೇ ಮೊದಲ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿರುವ ಮಂಜುನಾಥ್ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ 6ನೇ ವೇತನ ಆಯೋಗದ ಮೂಲಕ ಶಿಕ್ಷಕ ವೃಂದದ ವೇತನವನ್ನು ಹೆಚ್ಚಳ ಮಾಡಿದೆ. ಈ ಬಾರಿಯ ನೈಋತ್ಯ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ 18,560ಕ್ಕೂ ಅಧಿಕ ಮತದಾರರಿದ್ದು, ಅನುದಾನಿತ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಸರಕಾರಿ ನೌಕರರೊಂದಿಗೆ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು, ಅತಿಥಿ ಉಪನ್ಯಾಸಕರು ಸೇವಾ ಭದ್ರತೆಯಿಲ್ಲದೆ, ಖಾಯಂ ಹುದ್ದೆಯಿಲ್ಲದೆ, ಹೊಸ ನೇಮಕಾತಿಯೂ ಆಗದೆ ನಿರುದ್ಯೋಗಿಗಳಾಗಿ ಅಲ್ಪಸಂಬಳಕ್ಕೆ ಕೆಲಸ ಮಾಡುವಂತಾಗಿದೆ. ಖಾಲಿಯಿರುವ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿಕೊಂಡು ಮಾಸಿಕವಾಗಿ ಕನಿಷ್ಠ 40,000 ರೂ.ಗಳನ್ನು ನೀಡಬೇಕು. ಅನುದಾನರಹಿತ ಸಂಸ್ಥೆಗಳ ನೌಕರರು ಶೋಷಣೆಗೊಳಗಾಗಿದ್ದು ಅವರಿಗೆ ಸರಕಾರವು ಕನಿಷ್ಠ ಕ್ರೋಢೀಕೃತ ಮಾಸಿಕ ವೇತನವನ್ನು ನೀಡಬೇಕು. 60 ವರ್ಷ ತುಂಬುವವರೆಗೆ ಸೇವಾಭದ್ರತೆ ನೀಡುವ ಕಾನೂನು ರಚಿಸಬೇಕು ಇತ್ಯಾದಿ ಬಗ್ಗೆ ಗಮನಹರಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿರುವ ಮಂಜುನಾಥ್ ಕುಮಾರ್, ಕಳೆದ ಬಾರಿಯ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲುಂಡಿದ್ದ ತಾನು ಈ ಬಾರಿ ಗೆಲುವು ಸಾಧಿಸುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News