ಫೋನ್‌ಗಳಲ್ಲಿಯೇ ದಿನಕ್ಕೆ 4ರಿಂದ 7 ಗಂಟೆ ಕಳೆಯುತ್ತಿರುವ ವಿದ್ಯಾರ್ಥಿಗಳು: ಅಧ್ಯಯನ
ಹೊಸದಿಲ್ಲಿ,ಮೇ 20: ಭಾರತದಲ್ಲಿ ಓರ್ವ ವಿದ್ಯಾರ್ಥಿ ತನ್ನ ಮೊಬೈಲ್ ಫೋನ್‌ನ್ನು ದಿನಕ್ಕೆ ಸರಾಸರಿ 150ಕ್ಕಿಂತ ಹೆಚ್ಚು ಸಲ ಪರಿಶೀಲಿಸುತ್ತಾನೆ ಎನ್ನುವುದನ್ನು ಅಲಿಗಡ ಮುಸ್ಲಿಂ ವಿವಿ ಮತ್ತು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ(ಐಸಿಎಸ್‌ಎಸ್‌ಆರ್) ನಡೆಸಿದ ಅಧ್ಯಯನವು ಬಹಿರಂಗಗೊಳಿಸಿದೆ.
ದೇಶದ 20 ಕೇಂದ್ರೀಯ ವಿವಿಗಳಲ್ಲಿ ಈ ಅಧ್ಯಯನವನ್ನು ಕೈಗೊಳ್ಳಲಾಗಿದ್ದು,ಪ್ರತಿ ವಿವಿಯ 200 ವಿದ್ಯಾರ್ಥಿಗಳನ್ನು ಸಂದರ್ಶನಕ್ಕೊಳಪಡಿಸಲಾಗಿತ್ತು.
ಕಾತುರ ಮತ್ತು ಮಾಹಿತಿಗಳನ್ನು ಎಲ್ಲಿ ತಪ್ಪಿಸಿಕೊಳ್ಳುತ್ತೇವೆಯೋ ಎಂಬ ಭೀತಿ ವಿವಿ ವಿದ್ಯಾರ್ಥಿಗಳು ದಿನವೊಂದಕ್ಕೆ ಸರಾಸರಿ 150ಕ್ಕೂ ಅಧಿಕ ಸಲ ತಮ್ಮ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವಂತೆ ಮಾಡುತ್ತಿದೆ. ಇದು ಅವರ ಆರೋಗ್ಯದ ಮೇಲೆ ಮತ್ತು ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು ಎಂದು ಯೋಜನಾ ನಿರ್ದೇಶಕ ಮುಹಮ್ಮದ್ ನವೀದ್ ಖಾನ್ ಅವರು ಅಧ್ಯಯನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಂದರ್ಶನಕ್ಕೊಳಪಟ್ಟಿದ್ದ ಕೇವಲ ಶೇ.26ರಷ್ಟು ವಿದ್ಯಾರ್ಥಿಗಳು ಮುಖ್ಯವಾಗಿ ಕರೆಗಳನ್ನು ಮಾಡಲು ಫೋನ್‌ಗಳನ್ನು ಬಳಸುತ್ತಿದ್ದರೆ,ಉಳಿದ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ತಾಣಗಳು,ಗೂಗಲ್ ಹುಡುಕಾಟಗಳು ಮತ್ತು ಸಿನಿಮಾ ವೀಕ್ಷಣೆಯಂತಹ ಮನೋರಂಜನೆಗಳಿಗೆ ತಮ್ಮ ಸ್ಮಾರ್ಟ್ ಫೋನ್‌ಗಳನ್ನು ಬಳಸುತ್ತಿದ್ದಾರೆ.
ಕನಿಷ್ಠ ಶೇ.14ರಷ್ಟು ವಿದ್ಯಾರ್ಥಿಗಳು ದಿನಕ್ಕೆ ಮೂರು ಗಂಟೆ ಅಥವಾ ಅದಕ್ಕೂ ಕಡಿಮೆ ಅವಧಿಗೆ ತಮ್ಮ ಸ್ಮಾರ್ಟ್ ಫೋನ್‌ಗಳನ್ನು ಬಳಸುತ್ತಿದ್ದರೆ,ಶೇ.63ರಷ್ಟು ವಿದ್ಯಾರ್ಥಿಗಳು 4ರಿಂದ 7ಗಂಟೆ ಸಮಯವನ್ನು ಅದರಲ್ಲಿಯೇ ಕಳೆಯುತ್ತಿದ್ದಾರೆ. ಶೇ.23ರಷ್ಟು ವಿದ್ಯಾರ್ಥಿಗಳು ದಿನಕ್ಕೆ ಎಂಟು ಗಂಟೆಗಳಿಗಿಂತಲೂ ಹೆಚ್ಚಿನ ಸಮಯವನ್ನು ಫೋನ್‌ಗಳಲ್ಲಿ ವ್ಯಯಿಸುತ್ತಿದ್ದಾರೆ.
ಶೇ.80ರಷ್ಟು ವಿದ್ಯಾರ್ಥಿಗಳು ಸ್ವಂತದ ಮೊಬೈಲ್ ಫೋನ್‌ಗಳನ್ನು ಹೊಂದಿದ್ದು,ಈ ಪೈಕಿ ಹೆಚ್ಚಿನವು ಸ್ಮಾರ್ಟ್‌ಫೋನ್‌ಗಳಾಗಿವೆ ಎಂದು ಅಧ್ಯಯನವು ತಿಳಿಸಿದೆ.