ಅ.2 ರಂದು ಈ ರೀತಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಲಿದೆ ರೈಲ್ವೆ

Update: 2018-05-20 16:27 GMT

ಹೊಸದಿಲ್ಲಿ,ಮೇ 20: ಭಾರತೀಯ ರೈಲ್ವೆಯು ಸಲ್ಲಿಸಿರುವ ಪ್ರಸ್ತಾವವನ್ನು ಕೇಂದ್ರವು ಒಪ್ಪಿಕೊಂಡರೆ ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅ.2 ರಾಷ್ಟ್ರೀಯ ಸ್ವಚ್ಛತಾ ದಿವಸ್ ಮಾತ್ರವಲ್ಲ,ಸಸ್ಯಾಹಾರದ ಬಲವಾದ ಪ್ರತಿಪಾದಕರಾಗಿದ್ದ ರಾಷ್ಟ್ರಪಿತನ ಗೌರವಾರ್ಥ ‘ಸಸ್ಯಾಹಾರ ದಿನ’ವಾಗಿಯೂ ಆಚರಣೆಗೊಳ್ಳಲಿದೆ.

ಕೇಂದ್ರ ಸರಕಾರದಿಂದ ಗಾಂಧಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ 2018,2019 ಮತ್ತು 2020ರ ಅಕ್ಟೋಬರ್ 2ರಂದು ರೈಲ್ವೆಯ ಆವರಣದಲ್ಲಿ ಪ್ರಯಾಣಿಕರಿಗೆ ಮಾಂಸಾಹಾರವನ್ನು ಒದಗಿಸಲಾಗುವುದಿಲ್ಲ ಎಂದು ಭಾರತೀಯ ರೈಲ್ವೆ ತನ್ನ ಪ್ರಸ್ತಾವದಲ್ಲಿ ತಿಳಿಸಿದೆ.

  ಇದರ ಜೊತೆಗೆ ದಂಡಿ ಯಾತ್ರೆಯ ಸ್ಮರಣಾರ್ಥ ಮಾ.12ರಂದು ಸಾಬರಮತಿಯಿಂದ ‘ವಿಶೇಷ ಉಪ್ಪಿನ ರೈಲನ್ನು ’ಮತ್ತು ಸಾಬರಮತಿಯಿಂದ ಗಾಂಧಿಯವರೊಂದಿಗೆ ಗುರುತಿಸಿಕೊಂಡಿರುವ ವಿವಿಧ ನಿಲ್ದಾಣಗಳಿಗೆ ‘ಸ್ವಚ್ಛತಾ ಎಕ್ಸ್‌ಪ್ರೆಸ್’ ರೈಲುಗಳನ್ನು ಓಡಿಸಲೂ ಅದು ನಿರ್ಧರಿಸಿದೆ.

ರೈಲ್ವೆಯು ಗಾಂಧಿಯವರ ಚಿತ್ರದ ವಾಟರ್‌ಮಾರ್ಕ್ ಹೊಂದಿರುವ ಟಿಕೆಟ್‌ಗಳನ್ನೂ ವಿತರಿಸಲಿದೆ.

ತನ್ನ ಯೋಜನೆಗಳು ಗಾಂಧಿಯವರ 150ನೇ ಜನ್ಮ ದಿನಾಚರಣೆಯ ನೋಡಲ್ ಸಚಿವಾಲಯವಾಗಿರುವ ಸಂಸ್ಕೃತಿ ಸಚಿವಾಲಯದ ಅನುಮತಿಗೆ ಒಳಪಟ್ಟಿವೆ ಎಂದು ರೈಲ್ವೆ ತಿಳಿಸಿದೆ.

 ಎಲ್ಲ ವಿಭಾಗೀಯ ಮುಖ್ಯಕೇಂದ್ರಗಳಲ್ಲಿನ ನಿಲ್ದಾಣಗಳು,ವಿವಿಧ ಆಡಳಿತ ಕಚೇರಿಗಳ ಕಟ್ಟಡಗಳು ಮತ್ತು ವಲಯ ಮುಖ್ಯ ಕಚೇರಿಗಳಲ್ಲಿ ಗಾಂಧಿಯವರ ಮ್ಯೂರಲ್ ಚಿತ್ರ ಕಲಾಕೃತಿಗಳು, ಗಾಂಧಿಯವರೊಂದಿಗೆ ಗುರುತಿಸಕೊಂಡಿರುವ ಎಲ್ಲ ನಿಲ್ದಾಣಗಳಲ್ಲಿ ಆಚರಣೆಗೆ ಸಂಬಂಧಿಸಿದ ಕಲಾಕೃತಿಗಳ ರಚನೆ ಇತ್ಯಾದಿ ಕಾರ್ಯಕ್ರಮಗಳನ್ನೂ ರೈಲ್ವೆಯು ಹಮ್ಮಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News