ನೀತಿ ಸಂಹಿತೆ ಆಡಳಿತವನ್ನು ಸ್ಥಗಿತಗೊಳಿಸುವುದಿಲ್ಲ: ನ್ಯಾಯಾಲಯದಲ್ಲಿ ಚುನಾವಣಾ ಪೀಠ

Update: 2018-05-20 16:38 GMT

ಹೊಸದಿಲ್ಲಿ, ಮೇ 20: ಚುನಾವಣೆಯ ಸಮಯದಲ್ಲಿ ಘೋಷಿಸುವ ನೀತಿ ಸಂಹಿತೆಯು ಆಡಳಿತ ಯಂತ್ರವನ್ನು ಸ್ಥಗಿತಗೊಳಿಸುತ್ತದೆ ಎಂಬ ವಾದವನ್ನು ತಳ್ಳಿಹಾಕಿದ ಚುನಾವಣಾ ಆಯೋಗ, ನೀತಿ ಸಂಹಿತೆ ಆಡಳಿತಕ್ಕೆ ಕೇವಲ ಹೊಸ ಯೋಜನೆಗಳನ್ನು ಘೋಷಿಸದಂತೆ ತಡೆಹಿಡಿಯುತ್ತದೆ ಎಂದು ತಿಳಿಸಿದೆ.

ಸರಕಾರಿ ಇಲಾಖೆಗಳು ಚುನಾವಣಾ ಸಮಯದಲ್ಲಿ ಪ್ರಸ್ತಾಪಗಳು ಮತ್ತು ಯೋಜನೆಗಳಿಗೆ ಅಂಗೀಕಾರ ಪಡೆಯಲು ಬಯಸಿದರೆ, ಆಯೋಗವು ಸಮಯದ ತುರ್ತನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಆಯೋಗ ತಿಳಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲು ಮೇ 16ರಂದು ಚುನಾವಣಾ ಆಯೋಗ ಮತ್ತು ಕಾನೂನು ಆಯೋಗದ ಉನ್ನತ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ನೀತಿ ಸಂಹಿತೆಯ ವಿಷಯವನ್ನು ವಿಸ್ತಾರವಾಗಿ ಚರ್ಚಿಸಲಾಯಿತು. ಈ ವೇಳೆ ತನ್ನ ಮೇಲಿರುವ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಚುನಾವಣಾ ಆಯೋಗ, ನೀತಿ ಸಂಹಿತೆಯಿಂದ ಆಡಳಿತಯಂತ್ರ ಸ್ಥಗಿತಗೊಳ್ಳುವುದಿಲ್ಲ. ಮತದಾರ ಅಧಿಕಾರದಲ್ಲಿರುವ ಪಕ್ಷದ ಪ್ರಭಾವಕ್ಕೆ ಒಳಗಾಗದಿರಲಿ ಎಂಬ ಉದ್ದೇಶದಿಂದ ನೀತಿ ಸಂಹಿತೆಯು ಕೇವಲ ನೂತನ ಯೋಜನೆಗಳ ಘೋಷಣೆ ಮತ್ತು ಅನುಷ್ಠಾನಗೊಳಿಸದಂತೆ ತಡೆಯುತ್ತದೆ ಎಂದು ಆಯೋಗ ತಿಳಿಸಿದೆ.

 ಸರಕಾರಗಳು ನೀತಿ ಸಂಹಿತೆ ಜಾರಿಯಾಗಿರುವ ಸಂದರ್ಭದಲ್ಲೂ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಆಯೋಗದ ಅನುಮತಿಯನ್ನು ಕೇಳಿದ ನಿದರ್ಶನಗಳೂ ಇವೆ. ಅಂಥಾ ಸನ್ನಿವೇಶಗಳಲ್ಲಿ ಆಯೋಗವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಕಾನೂನು ಆಯೋಗವು, ಗೋವಾ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲಿ ಬಂದಿರುವ ಇಂಥ ಪ್ರಸ್ತಾವನೆಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇತಿಮಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಹಲವು ನಿಬಂಧನೆಗಳನ್ನೊಳಗೊಂಡ ನೀತಿ ಸಂಹಿತೆಯನ್ನು ಜಾರಿ ಮಾಡಲಾಗುತ್ತದೆ. ಈ ನಿಬಂಧನೆಗಳಿಗೆ ಎಲ್ಲ ರಾಜಕೀಯ ಪಕ್ಷಗಳು ಯಾವುದೇ ತಕರಾರಿಲ್ಲದೆ ಒಪ್ಪಿಕೊಂಡಿವೆ ಹಾಗೂ ಅದನ್ನು ಪಾಲಿಸುತ್ತವೆ. ನೀತಿ ಸಂಹಿತೆಯನ್ನು ರಾಜಕೀಯ ಪಕ್ಷಗಳು ಸರಿಯಾಗಿ ಪಾಲಿಸುತ್ತಿವೆಯೇ ಎಂಬುದನ್ನು ಗಮನಿಸುವ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News