ಔಷಧಿ ಸಂಬಂಧ ತ್ಯಾಜ್ಯಗಳ ಸಂಸ್ಕರಣೆಗೆ ಕಠಿಣ ನಿಯಮಗಳನ್ನು ಸೂಚಿಸಬೇಕು: ತಜ್ಞರು
ಹೊಸದಿಲ್ಲಿ, ಮೇ 20: ಔಷಧಿ ತಯಾರಿಕಾ ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳ ಸಂಸ್ಕರಣೆಗೆ ಮತ್ತು ನಿಗಾವಣೆಗೆ ಕಠಿಣ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ತ್ಯಾಜ್ಯಗಳಲ್ಲಿರುವ ಪ್ರತಿಜೀವಕಗಳನ್ನು ಸಂಸ್ಕರಿಸುವ ಸಾಧನಗಳನ್ನು ಈ ಕಾರ್ಖಾನೆಗಳು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಕ್ರಿಯ ಔಷಧೀಯ ವಸ್ತುಗಳನ್ನು ಸೂಕ್ಷ್ಮ ರಾಸಾಯನಿಕ ಮಾಲಿನ್ಯಕಾರಕ ಎಂದು ಪರಿಗಣಿಸಿ ಇವುಗಳ ತ್ಯಾಜ್ಯಗಳನ್ನು ಸಂಸ್ಕರಿಸಲು ಸೂಕ್ಷ್ಮಾಣು ನಿರೋಧಕ ಕೇಂದ್ರಿತ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ತಜ್ಞರು ತಿಳಿಸಿದ್ದಾರೆ. ಸರಿಯಾದ ಪಾರಿಸಾರಿಕ ಮಟ್ಟವನ್ನು ತಲುಪಲು ಸದ್ಯವಿರುವ ಕಾನೂನನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ ಹಿರಿಯ ನಿರ್ದೇಶಕ ಬನ್ವಾರಿ ಲಾಲ್ ತಿಳಿಸುವಂತೆ, ಔಷಧೀಯ ತ್ಯಾಜ್ಯಗಳು ಸಕ್ರಿಯ ಔಷಧೀಯ ಪದಾರ್ಥಗಳ ತಯಾರಿಕೆಯ ಸಮಯದಲ್ಲಿ ಉತ್ಪತ್ತಿಯಾಗುತ್ತವೆ. ರೋಗಿಗಳು ಮತ್ತು ಆಸ್ಪತ್ರೆಗಳು, ಜಾನುವಾರುಗಳಿಗೆ ಆಹಾರದ ಭಾಗವಾಗಿ ನೀಡುವ ಸಪ್ಲಿಮೆಂಟ್‌ಗಳು, ಪಶುಗಳ ಬಳಕೆಯಿಂದ ಉಂಟಾಗುವ ಕೃಷಿ ತ್ಯಾಜ್ಯಗಳು, ಕಾರ್ಖಾನೆಗಳ ಮೂಲಕ ಹೆಚ್ಚಾಗಿ ಪರಿಸರಕ್ಕೆ ಔಷಧೀಯ ತ್ಯಾಜ್ಯಗಳು ಬಡುಗಡೆಯಾಗುತ್ತವೆ. ಔಷಧಿಗಳ ಹೆಚ್ಚಿನ ಮತ್ತು ಸರಿಯಲ್ಲದ ಬಳಕೆ ಬಹುಔಷಧಿ ಪ್ರತಿರೋಧ ಸೂಕ್ಷ್ಮಾಣುಗಳ ಹರಡುವಿಕೆಗೆ ಕಾರಣವಾಗುತ್ತದೆ ಎಂದು ಲಾಲ್ ತಿಳಿಸಿದ್ದಾರೆ. ಭಾರತದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ನಿರ್ದೇಶನದಂತೆ ಈ ತ್ಯಾಜ್ಯಗಳ ಸಂಸ್ಕರಣೆಯನ್ನು ನಡೆಸಲಾಗುತ್ತದೆ. ಪ್ರಸ್ತುತ ನಿಯಮಗಳು ಪ್ರತಿಜೀವಕ ತ್ಯಾಜ್ಯಗಳನ್ನು ಒಳಗೊಂಡಿಲ್ಲ. ಹಾಗಾಗಿ ಅವುಗಳ ಬಗ್ಗೆ ಸರಿಯದ ದಾಖಲೆ ಅಥವಾ ನಿಗಾವಣೆಯನ್ನು ಇಡಲಾಗಿಲ್ಲ ಎಂದು ಲಾಲ್ ತಿಳಿಸಿದ್ದಾರೆ.