ವಿಟ್ಲ: ಘರ್ಷಣೆ, ಅಹಿತಕರ ಘಟನೆಗೆ ಸಂಬಂಧಿಸಿ ಆರು ಮಂದಿಯ ಬಂಧನ

Update: 2018-05-21 05:34 GMT

ಬಂಟ್ವಾಳ, ಮೇ 21: ಕಳೆದ ಶನಿವಾರ ರಾತ್ರಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘರ್ಷಣೆ ಹಾಗೂ ಅಹಿತಕರ ಘಟನೆಗೆ ಸಂಬಂಧಿಸಿ ಪ್ರತ್ಯೇಕ ಪ್ರಕರಣದಡಿ ಆರು ಮಂದಿ ಆರೋಪಿಗಳನ್ನು ಪೊಲೀಸರು ರವಿವಾರ ರಾತ್ರಿ ಬಂಧಿಸಿದ್ದಾರೆ.

ವಾಟ್ಸ್‌ಆ್ಯಪ್ ನಲ್ಲಿ ಸುಳ್ಳು ಸುದ್ದಿ ಹರಡಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಘರ್ಷಣೆಗೆ ಸಂಬಂಧಿಸಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ತಾಲೂಕಿನ ಪಂಜ ಸಮೀಪದ ಪಂಬೆತ್ತಾಡಿ ನಿವಾಸಿ ಸದಾಶಿವ ಗೌಡ ಎಂಬವರ ಪುತ್ರ ದಿನೇಶ ಯಾನೆ ದಯಾನಂದ(31) ಹಾಗೂ ಬಂಟ್ವಾಳ ತಾಲೂಕಿನ ಕೆರಲೆ ನಿವಾಸಿ ಲೋಕೇಶ್ ಎಂಬವರ ಪುತ್ರ ನಿತಿನ್ ಬಂಧಿತ ಆರೋಪಿಗಳು.

ಆರೋಪಿಗಳು ವಿಟ್ಲದಲ್ಲಿ ಎರಡು ಕೋಮಿನ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಕೋಮುಭಾವನೆ ಕೆರಳಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿಸಿ  ಶಾಂತಿಭಂಗವುಂಟು ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಘರ್ಷಣೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಇಲ್ಲಿನ ನಿವಾಸಿಗಳಾದ ಮುಹಮ್ಮದ್ ತಮೀಮ್(28), ಅಬ್ದುಲ್ ರಹಿಮಾನ್(35), ಮುಹಮ್ಮದ್ ಝಕರಿಯಾ(25) ಹಾಗೂ ಸುಲೈಮಾನ್(38) ಬಂಧಿತ ಆರೋಪಿಗಳು. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News