ಮೊದಲ ಇಫ್ತಾರ್ ಗೆ ನಾವು ಸ್ವಲ್ಪ ಅವಲಕ್ಕಿ ಮತ್ತು ಹಸಿ ಮೆಣಸು ಮಾತ್ರ ತಿಂದೆವು: ಅಬ್ದುಲ್ ರಹೀಂ

Update: 2018-05-21 06:22 GMT

ನಮಗೆ ಇಡೀ ವರ್ಷ ರಮಝಾನ್ ತಿಂಗಳಿನಂತೆ. ಏಕೆಂದರೆ ನಾವು ಆಹಾರಕ್ಕಾಗಿ ಇಡೀ ದಿನ ಹಸಿದಿರಬೇಕಾಗುತ್ತದೆ. ಆದುದರಿಂದ ನಮಗೆ ರಮಝಾನ್ ತಿಂಗಳಲ್ಲಿ ಉಪವಾಸವಿರುವುದು ಕಷ್ಟವಾಗುವುದಿಲ್ಲ. ರಮಝಾನ್ ತಿಂಗಳು ಎಲ್ಲವನ್ನೂ ವರ್ಜಿಸುವ ತಿಂಗಳೆಂದು ಎಲ್ಲರೂ ಹೇಳುತ್ತಾರೆ. ಆದರೆ ರಮಝಾನ್ ಸಂದರ್ಭ ಎಲ್ಲರೂ ಇಫ್ತಾರ್ ಅಥವಾ ಸಹರಿ ಹೊತ್ತಿನಲ್ಲಿ ಒಳ್ಳೆಯ ಆಹಾರ ತಿನ್ನುವುದನ್ನು ನೋಡಿ ನನಗೆ ಆಹಾರದ ಮೇಲೆ ಹೆಚ್ಚು ಆಸೆಯಾಗುತ್ತದೆ. ಅವುಗಳನ್ನು ತಿನ್ನಬೇಕೆಂದು ಮನಸ್ಸಾಗುತ್ತದೆ. ಸಂಜೆಯ ಹೊತ್ತು  ನಮಾಜ್ ಮಾಡುವಾಗ ನಾನು ಬಹಳಷ್ಟು ನಿತ್ರಾಣ ಅನುಭವಿಸುತ್ತೇನೆ. ಕೆಲವೊಮ್ಮೆ ನಮಾಝ್ ನಂತರ ಬಜಾರಿನಿಂದ ಹಿಂದಿರುಗಿದಾಗ ರಸ್ತೆ ಬದಿಗಳಲ್ಲಿ ಸ್ವಾದಿಷ್ಟ ಇಫ್ತಾರ್ ತಿನಿಸುಗಳನ್ನು ಅಲಂಕೃತವಾಗಿ ಇಡಲಾಗಿರುವುದನ್ನು ನೋಡಿದಾಗ ಸಣ್ಣ ಮಗುವಿನಂತೆ ನನಗೆ ಆಸೆಯಾಗುತ್ತದೆ. ನಾವು ಸಹರಿ ಸಮಯ ಕೇವಲ ತಂಗಳನ್ನವನ್ನು ತಿನ್ನುವಾಗ ಹೇಗೆ ಉಪವಾಸವನ್ನು ಸಹಿಸುತ್ತೇವೆಂದು ನನಗೇ ತಿಳಿದಿಲ್ಲ. ರಮಝಾನ್ ತಿಂಗಳ ಮೊದಲ ರಾತ್ರಿಯಂದು ನನ್ನ ಪತ್ನಿ ಗ್ರಾಮಸ್ಥರಿಂದ ಕಾಡಿ ಬೇಡಿ ತಂದ ಅನ್ನ ಮತ್ತು ಸ್ವಲ್ಪ ತರಕಾರಿಗಳನ್ನು ತಿಂದೆವು. ನಾನು ಕಡೆಯ ಬಾರಿ ಮೊಟ್ಟೆ ಯಾವಾಗ ತಿಂದಿದ್ದೆನೆಂದು ನನಗೇ ಗೊತ್ತಿಲ್ಲ. ಈ ರಮಝಾನ್ ಸಂದರ್ಭ ಕನಿಷ್ಠ ಒಮ್ಮೆಯಾದರೂ ಹಾಲಿನ ಜತೆ ಅನ್ನ ತಿನ್ನಬೇಕೆಂದು ನನ್ನ ಆಸೆಯಾಗಿದೆ. ಆದರೆ ಯಾರು ನನಗೆ ಈ ಉತ್ತಮ ಆಹಾರ ಒದಗಿಸುತ್ತಾರೆ ?

ಮೊದಲ ಇಫ್ತಾರ್ ಸಂದರ್ಭ ನಾವು ಸ್ವಲ್ಪ ಅವಲಕ್ಕಿ ಮತ್ತು ಹಸಿ ಮೆಣಸು ಮಾತ್ರ ತಿಂದಿದ್ದೆವು. ಕಳೆದ ಐದು ವರ್ಷಗಳಿಂದ ನಮ್ಮ ಪುತ್ರಿಯ ಜತೆ ನಾವು ವಾಸವಾಗಿದ್ದೇವೆ.  ನನ್ನ ಪುತ್ರಿ ಮತ್ತಾಕೆಯ ಕುಟುಂಬ ಕೂಡ ಕಡು ಬಡತನದಲ್ಲಿದೆ. ಆದರೆ ಕನಿಷ್ಠ ನನ್ನ ಮಕ್ಕಳಲ್ಲಿ ಒಬ್ಬರಾದರೂ ನಮಗೆ ಉಳಿದುಕೊಳ್ಳಲು ಜಾಗ ಹಾಗೂ ನಮಗೆ ಸ್ವಲ್ಪ ಆಹಾರ ಒದಗಿಸುತ್ತಿದ್ದಾಳಲ್ಲ ಎಂಬ ಕಾರಣಕ್ಕೆ ನಾನು ನನ್ನನ್ನು ಅದೃಷ್ಟಶಾಲಿ ಎಂದು ತಿಳಿಯುತ್ತೇನೆ.

ನಾವು ಸಾಯಬಹುದಾದರೆ ನಮ್ಮ ಕಷ್ಟಗಳೂ ನಮ್ಮೊಂದಿಗೆ ಅಂತ್ಯವಾಗುತ್ತವೆ. ಆದರೆ ಬದುಕಿರುವ ತನಕ ನಾವು ಹಸಿವನ್ನು ಎದುರಿಸಲೇ ಬೇಕು. ವೃದ್ಧಾಪ್ಯ ಒಂದು ಶಾಪ. ಮೂರು ಹೊತ್ತಿನ ಆಹಾರಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವಂತಾಗುತ್ತದೆ. ಗಂಜಿಯನ್ನು ಉಪ್ಪು ಹಾಗೂ ಕೆಲವೊಮ್ಮೆ ಒಣ ಮೆಣಸಿನೊಂದಿಗೆ ಈ ವೃದ್ಧಾಪ್ಯದಲ್ಲಿ ಪ್ರತಿ ದಿನ ತಿನ್ನುವುದು ಬಹಳ ಕಷ್ಟ. ಕೆಲವೊಮ್ಮ ನುಂಗಲೂ ಆಗುವುದಿಲ್ಲ. ತೀರದ ಹಸಿವು ಹಾಗೂ ಈ ಪ್ರಾಯದಲ್ಲಿ ಸ್ವಲ್ಪ ಉತ್ತಮ ಆಹಾರಕ್ಕಾಗಿ  ನಮಗಿರುವ ಆಸೆಯಿಂದಾಗಿ ಇರುವ ಆಕ್ರೋಶವನ್ನು ಪದಗಳಲ್ಲಿ ನಿಮಗೆ  ತಿಳಿ ಹೇಳಲು ಸಾಧ್ಯವಿಲ್ಲ.

ಅಬ್ದುಲ್ ರಹೀಂ(80)

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News