ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ನಿಂದ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು

Update: 2018-05-21 07:48 GMT

ಮಂಗಳೂರು, ಮೇ 21: ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆಯ ವೀಡಿಯೋವನ್ನು ತಿರುಚಿ ಕೋಮುಗಲಭೆಗೆ ಪ್ರೇರೇಪಣೆ ನೀಡಲಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಲಾಯಿತು.

ಕಾರ್ಯಕರ್ತರ ಪರವಾಗಿ ಸಮರ್ಥ ಭಟ್ ಎಂಬವರು ದೂರು ನೀಡಿದ್ದು, ಕಾಂಗ್ರೆಸ್- ಜೆಡಿಎಸ್ ಸರಕಾರ ರಚಿಸುವ ಹಿನ್ನೆಲೆಯಲ್ಲಿ ಮೇ 19ರಂದು ಸಂಜೆ 5:30ಕ್ಕೆ ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಜಯಕಾರ ಹಾಕಿದ್ದೆವು. ಆದರೆ ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ತಿರುಚಿ ಕಾಂಗ್ರೆಸ್ ಪಾರ್ಟಿ ಕಿ ಜೈ ಎಂದು ಹೇಳುವ ಸ್ಥಳದಲ್ಲಿ ‘ಪಾಕಿಸ್ತಾನಕ್ಕೆ ಜೈ’ ಎಂದು ಸುಳ್ಳಾಗಿ ತಿರುಚಿ ಮಂಗಳೂರಿನ ರೂಪೇಶ್ ಶೇಟ್ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ದಿ. ಮಂಗಳೂರು ಮಿರರ್ ಎಂಬ ವೆಬ್‌ಸೈಟ್‌ನಲ್ಲಿ ಕೂಡಾ ಈ ತಿರುಚಿದ ವೀಡಿಯೋವನ್ನು ಅಪ್‌ಲೋಡ್ ಮಾಡಿ ಕೋಮು ಭಾವನೆ ಕೆರಳಿಸುವ ಬರಹಗಳನ್ನು ಬರೆಯಲಾಗಿದೆ. ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಈ ತಿರುಚಲಾದ ವೀಡಿಯೋ ಹರಿದಾಡುತ್ತಿದ್ದು, ಅಪಪ್ರಚಾರದ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಂಬಂಧಪಟ್ಟವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ದೂರು ಸಲ್ಲಿಸಿದ ನಿಯೋಗದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ, ಮೇಯರ್ ಭಾಸ್ಕರ್ ಕೆ., ಉಪ ಮೇಯರ್ ಕೆ.ಮುಹಮ್ಮದ್, ಕಲ್ಲಿಗೆ ತಾರನಾಥ ಶೆಟ್ಟಿ, ಶಶಿಧರ ಹೆಗ್ಡೆ, ಪುರುಷೋತ್ತಮ ಚಿತ್ರಾಪುರ, ಅಪ್ಪಿ, ಸಬಿತಾ ಮಿಸ್ಕಿತ್, ಕವಿತಾ ವಾಸು, ಪ್ರವೀಣ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.

ಸ್ವಯಂ ಪ್ರೇರಿತ ಪ್ರಕರಣ ದಾಖಲು
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ‘ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ’ ಎನ್ನಲಾದ ವೀಡಿಯೋ ತುಣುಕು ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ವೀಡಿಯೋ ಎಡಿಟ್ ಮಾಡಿ ಹಾಕಿರುವ ಸಾಧ್ಯತೆಯೂ ಇದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News