ಮುಂಗಾರು ಮಳೆ, ಪ್ರಾಕೃತಿಕ ವಿಕೋಪ: ಎಚ್ಚರಿಕೆ, ಪೂರ್ವ ಸಿದ್ಧತೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2018-05-21 08:32 GMT

ಮಂಗಳೂರು, ಮೇ 21: ಮುಂಗಾರು ಮಳೆ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟ ಸೂಚನೆ ಹಾಗೂ ಮುನ್ನಚ್ಚರಿಕೆ ನೀಡಿದ್ದಾರೆ.

ಮುಂಗಾರು ಮಳೆಯ ಸಂಭವನೀಯ ಹಾನಿಗೆ ಸಂಬಂಧಿಸಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲು ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆಗಳು

* ಕೃತಕ ನೆರೆ ಉಂಟಾಗುವ ಸ್ಥಳಗಳಲ್ಲಿ ಈ ಹಿಂದಿನ ಘಟನೆಗಳ ವಿಶ್ಲೇಷಣೆ ಮಾಡಿ

*ಅಣೆಕಟ್ಟುಗಳು ಸಂಪೂರ್ಣ ನಿಯಂತ್ರಣದಲ್ಲಿರಬೇಕು. ಒಳ ಮತ್ತು ಹೊರ ಹರಿವಿನ ಬಗ್ಗೆ ನಿರಂತರ ಪರಿಶೀಲನೆ ಮಾಡಿ ನೆರೆ ಉಂಟಾಗಬಹುದಾದ ಪ್ರದೇಶಗಳ ಸೂಚನೆ ಪಡೆದು ನಿವಾರಣೆಗೆ ಸಿದ್ಧತೆ.

* ಅಡಿಕೆ ಕೊಳೆರೋಗದ ಬಗ್ಗೆ ರೈತರಿಗೆ ಮುಂಚಿತವಾಗಿ ಸಲಹೆ, ಸೂಚನೆ ಒದಗಿಸಿ.

* ಅಗತ್ಯವಿರುವೆಡೆ ಗಂಜಿ ಕೇಂದ್ರಗಳನ್ನು ಗುರುತಿಸಿ ಸಿದ್ಧಗೊಳಿಸಿ.

* ನೆರೆ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಅಗತ್ಯ ದೋಣಿಗಳನ್ನು ಸಿದ್ಧವಾಗಿರಿಸಿ. ಸ್ಥಳೀಯ ದೋಣಿ ಮಾಲಕರ ಸಹಕಾರ ಪಡೆದುಕೊಳ್ಳಿ.

* ತಾಲೂಕು ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಕಂಟ್ರೋಲ್ ರೂಂ ಕಾರ್ಯ ನಿರ್ವಹಿಸಬೇಕು.

*ಸಂಭವನೀಯ ಭೂಕುಸಿತದ ಜಾಗವನ್ನು ಪತ್ತೆ ಹಚ್ಚಿ.

* ಕಡಲ್ಕೊರೆತ ತಡೆಗೆ ಅರೆ ಶಾಶ್ವತ (ಕಲ್ಲುಗಳನ್ನು ಹಾಕುವುದು, ಸಮುದ್ರ ಗೋಡೆ ನಿರ್ಮಾಣ) ಕಾಮಗಾರಿ ಮುಂಚಿತವಾಗಿ ನಿರ್ವಹಿಸಿ.

*ಹವಾಮಾನ ವೈಪರೀತ್ಯದ ಕುರಿತಂತೆ ಕನಿಷ್ಠ ಎರಡು ದಿನ ಮುಂಚಿತವಾಗಿ ಸಾರ್ವಜನಿಕರು, ಮೀನುಗಾರರಿಗೆ ಒದಗಿಸಿ.

* ಪ್ರಾಕೃತಿಕ ವಿಕೋಪ ಹಾಗೂ ನಿರ್ವಹಣೆಗೆ ಯಾರನ್ನು ಸಂಪರ್ಕಸಬೇಕು ಸೇರಿದಂತೆ ಸಮಗ್ರ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಸಾರ್ವಜನಿಕರಿಗೆ ಒದಗಿಸುವುದು, ಜತೆಗೆ ಆಕಾಶವಾಣಿ ಮೂಲಕ ಮಾಹಿತಿ ನೀಡುವುದು.

* ನೀರು ಪೂರೈಕೆಯಲ್ಲಿ ಸೋರಿಕೆ ಪತ್ತೆ ಹಚ್ಚಿ, ನೀರಿನಲ್ಲಿನ ಲವಣಾಂಶದ ಬಗ್ಗೆಯೂ ಸೂಕ್ತ ಪರಿಶೀಲನೆ ನಡೆಸಬೇಕು.

* ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಜತೆಗೆ ಸೂಕ್ತ ಔಷಧಿಗಳ ಸಂಗ್ರಹ, ಶೇಖರಣೆ.

* ಸಾರ್ವಜನಿಕರ ಕರೆಗಳಿಗೆ ತಕ್ಷಣ ಸ್ಪಂದಿಸಿ.

* ವ್ಯಾಟ್ಸ್‌ಆ್ಯಪ್ ಗುಂಪು ಆರಂಭಿಸಿ.

* ಮಳೆ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸರಾಗವಾಗಿ ನೀರು ಹರಿದುಹೋಗಲು ಕ್ರಮ.

* ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯತ್ಯಯದ ಬಗ್ಗ ಜನರಿಗೆ ಸೂಕ್ತ ಮಾಹಿತಿ.

* ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಹಾನಿ, ಭೂ ಕುಸಿತದಿಂದ ಮನೆಗಳಿಗೆ ಹಾನಿ, ಮರಣ ಸಂಭವಿಸಿದ ಸಂದರ್ಭ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಿ.

* ಭಾರೀ ಮಳೆಯ ಸಂದರ್ಭ ಶಾಲಾ ಮಕ್ಕಳಿಗೆ ರಜೆ ನೀಡುವ ಅನಿವಾರ್ಯ ಕಂಡುಬಂದರೆ ಸ್ಥಳೀಯ ಶಿಕ್ಷಣಾಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದು.

* ಕೃಷಿ ಹೊಂಡ ಮಾಡಿದವರು ಸ್ಥಳದಲ್ಲಿ ಸೂಕ್ತ ಬೇಲಿ, ಫಲಕ ಹಾಕಬೇಕು.

* ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು.


ಕಡಲ್ಕೊರೆತ ಸಂದರ್ಭ ಜನ ಸಮೂಹ ನಿಯಂತ್ರಿಸಿ!

ಉಳ್ಳಾಲ, ಸೋಮೇಶ್ವರ ಸೇರಿದಂತೆ ಕರಾವಳಿಯ ಸಮುದ್ರಗಳ ತೀರದಲ್ಲಿ ಕಡಲ್ಕೊರೆತದ ವೇಳೆ ಆಗುವ ಹಾನಿಯನ್ನು ನಿವಾರಿಸುವುದಕ್ಕಿಂತಲೂ ಅಲ್ಲಿ ಸೇರುವ ಜನಸಮೂಹವನ್ನು ನಿಯಂತ್ರಿಸುವುದೇ ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಿನ ವಿಷಯವಾಗಿರುತ್ತದೆ. ಹಾಗಾಗಿ ಅದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪೊಲೀಸ್ ಆಧಿಕಾರಿಗಳಿಗೆ ಸೂಚನೆ ನೀಡಿದರು.

ಕಡಲ್ಕೊರೆತದ ಸಂದರ್ಭದಲ್ಲಿ ಆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕು. ಬ್ಯಾರಿಕೇಡ್‌ಗಳನ್ನು ಹಾಕಿ ಹೋಂಗಾರ್ಡ್‌ಗಳನ್ನು ನೇಮಕ ಮಾಡುವ ಮೂಲಕ ಜನ ಸಮೂಹವನ್ನು ತಡೆಯಬಹುದು. ಹಾಗೂ ತಕ್ಷಣ ಪರಿಹಾರ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಡಿಸಿಪಿ ಹನುಮಂತರಾಯರಿಗೆ ಸೂಚನೆ ನೀಡಿದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತವೆ. ಡೆಂಗ್, ಮಲೇರಿಯಾ, ಕಾಲರಾದಂತಹ ರೋಗಗಳು ಜನಸಾಮಾನ್ಯರನ್ನು ಕಾಡುತ್ತದೆ. ಹಾಗಾಗಿ ಮಂಗಳೂರು ನಗರ ಸೇರಿದಂತೆ, ಪ್ರತಿ ತಾಲೂಕಿನಲ್ಲೂ ಆರೋಗ್ಯಾಧಿಕಾರಿಗಳು ಸಾಂಕ್ರಾಮಿಕ ರೋಗಗಳು ಬಾರದಂತೆ ಕ್ರಮಗಳನ್ನು ಕೈಗೊಳ್ಳುವ ಆಶ್ವಾಸನೆಯನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News