ಅವಹೇಳನಕಾರಿ ಸಂದೇಶಗಳನ್ನು ‘ಗೊತ್ತಿಲ್ಲದೆ’ ಫಾರ್ವರ್ಡ್ ಮಾಡಿದರೂ ಶಿಕ್ಷೆ: ಮಂಗಳೂರು ಕಮಿಷನರ್ ಎಚ್ಚರಿಕೆ

Update: 2018-05-21 11:11 GMT

ಮಂಗಳೂರು, ಮೇ 21: ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುವವರಿಗೆ ಸುದ್ದಿ ಮಾಧ್ಯಮಗಳ ಮೂಲಕ ಈಗಾಗಲೇ ಹಲವು ಬಾರಿ ಎಚ್ಚರಿಕೆ ಸೂಚನೆ ನೀಡಲಾಗಿದೆ. ಇದನ್ನು ಮತ್ತೆ ಮುಂದುವರಿಸಿದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆಯ ಸಂದರ್ಭದ ವೀಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ದೂರನ್ನು ಸ್ವೀಕರಿಸಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿ ಅವರು ಈ ವಿಷಯ ತಿಳಿಸಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ್ದೆನ್ನಲಾದ ನಕಲಿ ವೀಡಿಯೋ ವೈರಲ್ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರೇ ಸ್ವಯಂ ದೂರು ದಾಖಲಿಸಲು ನಿರ್ಧರಿಸಿದ್ದರು. ಆದರೆ ಆ ಬಳಿಕ ಸಮರ್ಥ್ ಎಂಬವರು ದೂರು ನೀಡಿದ ಕಾರಣ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ತನಿಖೆಯನ್ನು ಕ್ಷಿಪ್ರಗತಿಯಲ್ಲಿ ನಡೆಸಿ ತಪಿಸ್ಥಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಾತಿ, ಪಕ್ಷ, ಧರ್ಮ ಸಂಬಂಧಪಟ್ಟ ಅವಹೇಳನಕಾಗಿ ಸಂದೇಶ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿ. ಒಂದು ವೇಳೆ ಇಂತಹ ಸಂದೇಶಗಳನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಿದರೆ ಅದು ಅಪರಾಧವಾಗುತ್ತದೆ. ಆ ಬಳಿಕ ‘ಗೊತ್ತಿಲ್ಲದೆ ಫಾರ್ವರ್ಡ್ ಮಾಡಿದ್ದೆ’ ಎಂಬ ಸಬೂಬು ಹೇಳಿದರೂ

ಪ್ರಕರಣದಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ಮಂಗಳೂರು ಪ್ರಬುದ್ಧ ನಾಗರಿಕರನ್ನೊಳಗೊಂಡ ಒಳ್ಳೆಯ ನಗರ. ಜನರಿಗೆ ಈ ರೀತಿಯ ವಿವಾದಗಳು ಬೇಡ. ಈ ರೀತಿಯ ಪ್ರಕರಣಗಳ ತನಿಖೆಗೆ ಜನರ ಸಹಕಾರನೂ ಅಗತ್ಯ ಎಂದರು.

ಕಾರ್ಯಾಚರಣೆ ಆರಂಭ

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಕೋಮುಭಾವನೆ ಕೆರಳಿಸುವಂತಹ ದುಷ್ಕೃತ್ಯ ಎಸಗುವವರ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News