ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಹೆಚ್ಚಳ

Update: 2018-05-21 13:15 GMT

►ಶಂಭೂರು ಡ್ಯಾಂನಲ್ಲೂ ಗರಿಷ್ಠ ನೀರು ಸಂಗ್ರಹ

►ತುಂಬೆ ಡ್ಯಾಂನಿಂದ 6 ಮೀಟರ್‌ಗಿಂತ ಹೆಚ್ಚಿನ ನೀರು ಬಿಡುಗಡೆ

ಬಂಟ್ವಾಳ, ಮೇ 20: ಘಟ್ಟ ಪ್ರದೇಶದಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪರಿಣಾಮ ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ 6 ಮೀಟರ್‌ಗಿಂತ ಹೆಚ್ಚಿನ ನೀರನ್ನು ಶನಿವಾರದಿಂದ ಹೊರಬಿಡಲಾಗುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಂಬೆ ಡ್ಯಾಂನಲ್ಲಿ 5 ಮೀಟರ್ ನೀರು ಸಂಗ್ರಹವನ್ನು ಪ್ರಸಕ್ತ ಅವಧಿಯಲ್ಲಿ 6 ಮೀಟರ್‌ಗೆ ಏರಿಸಲಾಗಿತ್ತು. 2018ರ ಜನವರಿ ಬಳಿಕ 6 ಮೀಟರ್ ನೀರು ಸಂಗ್ರಹ ಮಾಡಲಾಗಿತ್ತು.
ಪಶ್ಚಿಮ ಘಟ್ಟದಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗತೊಡಗಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಶಂಭೂರು ಎಎಂಆರ್ ಮತ್ತು ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳ ಹರಿವು ಹೆಚ್ಚಾಗಿದೆ.

ಶಂಭೂರು ಡ್ಯಾಂನಿಂದ ಹೊರ ಬಿಡುತ್ತಿರುವ ನೀರು ತುಂಬೆ ಡ್ಯಾಂ ಸೇರುತ್ತಿದ್ದು ತುಂಬೆ ಡ್ಯಾಂನಲ್ಲಿ 6 ಮೀಟರ್‌ಗೂ ಹೆಚ್ಚು ನೀರು ಸಂಗ್ರಹವಾಗುತ್ತಿದ್ದಂತೆ ಡ್ಯಾಂನ ಒಂದು ದ್ವಾರವನ್ನು ತೆರೆದು ನೀರು ಹೊರಬಿಡಲಾಗುತ್ತಿದೆ.

ಕಳೆದ ವರ್ಷದ ಬೇಸಿಗೆಯ ಸಮಯದಲ್ಲಿ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿತ ಉಂಟಾಗಿತ್ತು. ಆ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಮಳೆಗಾಲ ಆರಂಭವಾಗುತ್ತಿದ್ದಂತೆ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿತ್ತು.
ಪರಿಹಾರ ವಿತರಣೆ: ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ನೀರು ಸಂಗ್ರಹದಿಂದ ಮುಳುಗಡೆಯಾದ ರೈತರ ಜಮೀನಿಗೆ ಪರಿಹಾರವನ್ನು ಈಗಾಗಲೇ ವಿತರಿಸಲಾಗಿದೆ. 6 ಮೀಟರ್ ನೀರು ಸಂಗ್ರಹದಿಂದ ಬಂಟ್ವಾಳ ತಾಲೂಕಿನ ನರಿಕೊಂಬು, ಬಿ.ಮೂಡ, ಸಜೀಪ ಮುನ್ನೂರು ಪಾಣೆಮಂಗಳೂರು ಸಹಿತ ಹಲವು ಗ್ರಾಮಗಳಲ್ಲಿ ಮುಳುಗಡೆಯಾಗಿರುವ ಜಮೀನು ಮಾಲಕರಿಗೆ ಪರಿಹಾರ ನೀಡಲು ಸರಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ. ಡ್ಯಾಂನಲ್ಲಿ ಯಾವ ಕಾರಣಕ್ಕೂ 6 ಮೀಟರ್‌ಗಿಂತ ಹೆಚ್ಚು ನೀರು ಸಂಗ್ರಹಿಸಲಾಗುವುದಿಲ್ಲ. ಹೀಗಾಗಿ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದ್ದಾರೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ
ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲಯಲ್ಲಿ ಡ್ಯಾಂನಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಹಾಗೆಯೇ ಶಂಭೂರು ಎಎಂಆರ್ ಡ್ಯಾಂನಿಂದ ನೀರು ಹೊರ ಬಿಡುತ್ತಿರುವುದರಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀಟರ್‌ಗಿಂತ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಡ್ಯಾಂಗಳ ಕೆಳಭಾಗದ ನದಿ ದಡದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ದಡದಲ್ಲಿರುವ ಕೃಷಿ ಪಂಪ್‌ಗಳು, ಸಾಕುಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಎಚ್ಚರ ವಹಿಸುವಂತೆ ಡ್ಯಾಂ ಮೇಲ್ವಿಚಾರಕರು ತಿಳಿಸಿದ್ದಾರೆ.

ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹವಾಗಿದೆ. ಎಎಂಆರ್ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿರುವುದರಿಂದ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 6 ಮೀಟರ್‌ಗಿಂತ ಹೆಚ್ಚಾಗಿದೆ. ಹೆಚ್ಚುವರಿ ನೀರನ್ನು ಡ್ಯಾಂನ ಒಂದು ದ್ವಾರದ ಮೂಲಕ ಹೊರಬಿಡಲಾಗುತ್ತಿದೆ. ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹವಿರುವುದರಿಂದ ಮಳೆಗಾಲದವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉದ್ಭವವಾಗದು.

ಭಾಸ್ಕರ ಕೆ. ಮೊಯ್ಲಿ, ಮನಪಾ ಮೇಯರ್

ಕುಡಿಯುವ ನೀರಿಗೆ ಸಮಸ್ಯೆ ಇಲ್ಲ
ಈಗಾಗಲೇ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದೆ. ಇನ್ನೇನು 10 ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದೆ. ಇನ್ನೂ ತುಂಬೆ ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹವಿದೆ. ಅಲ್ಲದೆ ಶಂಭೂರು ಡ್ಯಾಂನಲ್ಲೂ ನೀರು ಸಂಗ್ರಹವಿರುವುದರಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗದು ಎಂದು ಡ್ಯಾಂ ನಿರ್ವಾಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ನೀರು ಪೂರೈಕೆಯಲ್ಲೂ ವ್ಯತ್ಯಯ ಮಾಡುವ ಅಗತ್ಯ ಕಂಡು ಬರುತ್ತಿಲ್ಲ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

Writer - ರಹ್ಮಾನ್ ತಲಪಾಡಿ

contributor

Editor - ರಹ್ಮಾನ್ ತಲಪಾಡಿ

contributor

Similar News