ಮಂಗಳೂರು: ಐಎಸ್‌ಪಿಆರ್ ಎಲ್ ಗೆ ಅಬುದಾಬಿಯಿಂದ 2ಮಿಲಿಯನ್ ಬ್ಯಾರಲ್ ಕಚ್ಚಾ ಇಂಧನ ತೈಲ

Update: 2018-05-21 16:03 GMT

ಮಂಗಳೂರು,ಮೇ 21:ದೇಶದ ತುರ್ತು ಸಂದರ್ಭದಲ್ಲಿ ಬಳಸಲು ಶೇಖರಿಸುವ ಪೆಟ್ರೋಲಿಯಂ ಸಂಗ್ರಹ ಗಾರದಲ್ಲಿ ಒಂದಾದ ಮಂಗಳೂರು ಎಂಆರ್‌ಪಿಎಲ್ ಬಳಿಇರುವ ಐಎಸ್‌ಪಿಆರ್‌ಎಲ್ ಸ್ಥಾವರಕ್ಕೆ ಇಂದು ಅಬುದಾಬಿ ರಾಷ್ಟ್ರಿಯ ಪೆಟ್ರೋಲ್ ಕಂಪೆಯಿಂದ 2ಮಿಲಿಯನ್ ಬ್ಯಾರಲ್ ಕಚ್ಚಾ ಪೆಟ್ರೋಲ್ ತೈಲ ವನ್ನು ತಂಬುವ ಮೂಲಕ ಯೋಜನೆಗೆ ಚಾಲನೆ ನಿಡಲಾಯಿತು.

ದೇಶದ ಪೆಟ್ರೋಲಿಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ಸುಧೀರ್ ಈ ಸಮಾರಂಭವನ್ನುದ್ದೇಶಿ ಮಾತನಾಡುತ್ತಾ ದೇಶದ ಪ್ರಮುಖ ಮೂರು ಐಎಸ್‌ಪಿಆರ್‌ಎಲ್ ಕೇಂದ್ರಗಳಲ್ಲಿ ಒಂದಾದ ಮಂಗಳೂರು ಕೇಂದ್ರದಲ್ಲಿ 1.5ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ,ಪಾದೂರಿನಲ್ಲಿರುವ ಕೇಂದ್ರದಲ್ಲಿ 2.5 ಮಿಲಯನ್ ಮೆಟ್ರಿಕ್ ಟನ್ ಸಾಮರ್ಥ್ಯ ಹಾಗೂ ವಿಶಾಖ ಪಟ್ಟಣಂನಲ್ಲಿ 1.33 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ತೈಲ ಸಂಗ್ರಹಗಾರವನ್ನು ಹೊಂದಿದೆ.ಶೀಘ್ರದಲ್ಲಿ ಇನ್ನಷ್ಟು ಕಚ್ಚಾ ತೈಲವನ್ನು ಈ ಘಟಕಕ್ಕೆ ಹಾಗೂ ಮುಂದಿನ ಹಂತದಲ್ಲಿ ಪಾದೂರಿನಲ್ಲಿರುವ ಭೂಗತ ಬೃಹತ್ ಸಂಗ್ರಹ ಕೇಂದ್ರಕ್ಕೂ ತುಂಬುವ ಯೋಜನೆಗೆ ಚಾಲನೆ ನಿಡಲಾಗುವುದು ಎಂದು ಸಂಜಯ್ ಸುಧೀರ್ ತಿಳಿಸಿದ್ದಾರೆ.

ಕಳೆದ ಗಣರಾಜ್ಯ ದಿನದಂದು ದೇಶಕ್ಕೆ ಭೇಟಿ ನೀಡಿದ ಯುಎಇಯ ರಾಜ ಪ್ರತಿನಿಧಿಗಳ ಜೊತೆ ಪ್ರಧಾನಿ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ದೇಶದ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಯುಎಇಯ ಮಂತ್ರಿ ಎಚ್‌ಇ ಸುಲ್ತಾನ್ ಅಲ್ ಜಬ್ಬೀರ್ ಮತ್ತು ಅಬುದಾಬಿ ರಾಷ್ಟ್ರೀಯ ಆಯಿಲ್ ಕಂಪೆನಿ ಮಾಡಿಕೊಂಡಿರುವ ಒಡಂಬಡಿಕೆಯ ಪ್ರಕಾರ ಪ್ರಥಮ ಹಂತದ ಕಚ್ಚಾ ತೈಲ ಸರಬರಾಜಾಗಿದೆ ಇದಕ್ಕಾಗಿ ಯುಎಇ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಎಂದು ಸಂಜಯ್ ಸುಧೀರ್ ತಿಳಿಸಿದ್ದಾರೆ.

ಅಬುದಾಬಿ ನ್ಯಾಶನಲ್ ಆಯಿಲ್ ಕಂಪೆನಿಯ ಮಾರುಕಟ್ಟೆ,ವಿತರಣೆ ಹಾಗೂ ಉದ್ಯಮ ವಿಭಾಗದ ನಿರ್ದೇಶಕ ಅಬ್ದುಲ್ಲಾ ಸಲೀಂ ಅಲ್ ದಹೇರಿ ಮಾತನಾಡುತ್ತಾ ಭಾರತದೊಂದಿಗೆ ಉದ್ಯಮ ನಡೆಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ.ಈ ಯೋಜನೆಯ ಒಡಂಬಡಿಕೆಯಿಂದ ಶೇ 10ರಷ್ಟು ಉತ್ಪನ್ನವನ್ನು ಭಾರತದಲ್ಲಿ ತಮ್ಮ ಸಂಸ್ಥೆ ಮಾರುಕಟ್ಟೆಯ ಮೂಲಕ ವಿತರಣೆ ಮಾಡುವ ಅವಕಾಶ ದೊರೆತಿದೆ ಎಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಚ್.ಕುಮಾರ್,ಐಎಸ್‌ಪಿಆರ್‌ಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ,ಆಡಳಿತ ನಿರ್ದೇಶಕ ಎಚ್.ಪಿ.ಎಸ್‌ಅಹುಜ,ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News