ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ: ಮಟ್ಟಾರ್ ರತ್ನಾಕರ ಹೆಗ್ಡೆ

Update: 2018-05-21 16:25 GMT

ಉಡುಪಿ, ಮೇ 21: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರ ಒಲವು ಬಿಜೆಪಿ ಕಡೆಗಿದ್ದು 104 ಸ್ಥಾನಗಳಲ್ಲಿ ಪಕ್ಷವನ್ನು ಮತದಾರರು ಗೆಲ್ಲಿಸಿದ್ದಾರೆ. ಇನ್ನು ಸುಮಾರು 20ರಿಂದ 25 ಕಡೆಗಳಲ್ಲಿ ಅಲ್ಪಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದು, ನ್ಯಾಯಯುತವಾಗಿ ಜನಮತ ಗಣನೆಗೆ ಅನುಗುಣವಾಗಿ ಬಿಜೆಪಿ 5 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಬೇಕಾಗಿತ್ತು. ಆದರೆ ಇದು ಸಾಧ್ಯವಾಗದಿರುವುದು ಅತ್ಯಂತ ದುಃಖಕರ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ.

ಚುನಾವಣಾ ಕಾಲದಲ್ಲಿ ಹಾವು ಮುಂಗುಸಿಗಳಂತೆ ಹೋರಾಟ ನಡೆಸಿ ಪರಸ್ಪರ ಕೆಸರೆಚಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಮೈತ್ರಿಗೆ ಮುಂದಾಗಿ ಸರಕಾರ ರಚನೆಗೆ ಒಂದಾಗಿರುವುದು ರಾಜಕೀಯ ವಿಪರ್ಯಾಸ. ತನ್ನ ಪಕ್ಷಕ್ಕೆ ಬಹುಮತ ಬಾರದೆ ಇದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ, ಪಕ್ಷ ಹಿಂದಿನ ಚುನಾವಣೆಗಿಂತ ಎರಡು ಸ್ಥಾನ ಕಡಿಮೆ ಗಳಿಸಿದರೂ ಕೂಡಾ ಹಿಂಬಾಗಿಲ ಮೂಲಕ ಅಧಿಕಾರ ನಡೆಸಲು ಕಾಂಗ್ರೆಸಿನೊಂದಿಗೆ ಸೇರಿಕೊಂಡು ಅಪವಿತ್ರ ಮೈತ್ರಿ ನಡೆಸಿರುವುದು ರಾಜ್ಯದ ಜನರ ದೌರ್ಭಾಗ್ಯವೇ ಸರಿ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತದಾರರ ಆಶೋತ್ತರಗಳಿಗೆ ವಿರುದ್ಧವಾಗಿ ಸರಕಾರ ರಚಿಸಿದರೂ ಕೂಡಾ ಈ ಸರಕಾರ ಹೆಚ್ಚು ದಿನ ಬಾಳದು. ಮುಂದಿನ ಆರು ತಿಂಗಳಲ್ಲೇ ಈ ಸರಕಾರ ಬೀಳಲಿದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮತ್ತೊಮ್ಮೆ ಒಲಿಯಲಿದ್ದಾರೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News