ಶಾಂತಿಯುತ ಬಂಟ್ವಾಳವೇ ನನ್ನ ಗುರಿ : ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

Update: 2018-05-22 06:26 GMT

ವಿಧಾನಸಭಾ ಚುನಾವಣೆಯಲ್ಲಿ ಏಳನೇ ಗೆಲುವಿನ ಉತ್ಸಾಹದಲ್ಲಿದ್ದ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಿದವರು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು. 2013ರ ಚುನಾವಣೆಯಲ್ಲಿ ರೈ ವಿರುದ್ಧ 17,850 ಮತಗಳ ಅಂತರದಲ್ಲಿ ಸೋತಿದ್ದ ರಾಜೇಶ್ ನಾಯ್ಕ್ ಈ ಬಾರಿ 15,971 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಜೇಶ್ ನಾಯ್ಕ್ ಮಂಗಳೂರು ತಾಲೂಕಿನ ಗಂಜಿಮಠದ ತೆಂಕ ಎಡಪದವು ಗ್ರಾಮದ ನಿವಾಸಿ. ರಮೇಶ ನಾಯ್ಕ್ ಮತ್ತು ಸರೋಜಿನಿ ಆರ್. ನಾಯ್ಕ್ ದಂಪತಿಯ ಇಬ್ಬರು ಮಕ್ಕಳ ಪೈಕಿ ರಾಜೇಶ್ ನಾಯ್ಕ್ ಹಿರಿಯವರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಮೈಸೂರು ಜೆಎಸ್ಸೆಸ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಗಳಿಸಿದ್ದಾರೆ. ಪತ್ನಿ ಉಷಾ ನಾಯ್ಕ್ ಮತ್ತು ಇಬ್ಬರು ಪುತ್ರರೊಂದಿಗೆ ತೆಂಕ ಎಡಪದವು ಗ್ರಾಮದ ಉಳಿಪ್ಪಾಡಿಗುತ್ತು ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ವಾಸವಾಗಿದ್ದಾರೆ. ಆರಂಭದಲ್ಲಿ ದಾವಣಗೆರೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ನಾಯ್ಕ್ ಬಳಿಕ ಮನೆಯವರ ಅಪೇಕ್ಷೆಯಂತೆ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು. ಕೆಂಪು ಕಲ್ಲಿನ ಕ್ವಾರಿಗೆ ಮಾತ್ರ ಮೀಸಲು ಎಂಬಂತಿದ್ದ ಒಡ್ಡೂರಿನ ಸುಮಾರು ನೂರು ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಮಾವು, ಅರಶಿನ, ಅನನಾಸು, ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಸಾವಯವ ಕೃಷಿಯಲ್ಲಿ ಇತರ ರೈತರಿಗೆ ಮಾದರಿಯಾಗಿದ್ದಾರೆ. 200ಕ್ಕೂ ಹೆಚ್ಚು ಹಸುಗಳನ್ನು ಹೊಂದಿದ್ದು ದಿನವೊಂದಕ್ಕೆ ಸುಮಾರು 800ರಿಂದ 1,000 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಪ್ರತೀದಿನ 60 ಕೆವಿ ಬಯೋಗ್ಯಾಸ್ ವಿದ್ಯುತ್ ಉತ್ಪಾದನೆ ಮೂಲಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ಸುಮಾರು ಎರಡು ಎಕರೆ ಜಮೀನಿನಲ್ಲಿ 50 ಅಡಿ ಆಳಕ್ಕೆ ಕೆರೆ ನಿರ್ಮಿಸಿ ಇದರಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ.

ಕ್ರೀಡಾಪಟುವಾಗಿರುವ ಅವರು ಒಡ್ಡೂರಿನ ತನ್ನ ಮನೆ ಯಂಗಳದಲ್ಲಿಯೇ ಕ್ರೀಡಾಂಗಣ ನಿರ್ಮಿಸಿ, ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ರಾಜೇಶ್ ನಾಯ್ಕ್ ತನ್ನ ಗೆಲುವಿನ ಬಗ್ಗೆ ‘ವಾರ್ತಾಭಾರತಿ’ ಜೊತೆ ಅನಿಸಿಕೆ ಹಂಚಿಕೊಂಡಿದ್ದು ಹೀಗೆ.

ನಿಮ್ಮ ಗೆಲುವಿಗೆ ಕಾರಣವಾದ ಅಂಶಗಳು ಯಾವುದು?
ಮೊದಲನೆಯದಾಗಿ ಬಿಜೆಪಿ ಕಾರ್ಯಕರ್ತರ ಪರಿಶ್ರಮ. ಇಲ್ಲಿನ ಶಾಸಕರ ನಡವಳಿಕೆ ಹಾಗೂ ಅವರ ಕೆಲವೊಂದು ವರ್ತನೆಗಳು. ಜನರಿಗೆ ಬಿಜೆಪಿಯ ಮೇಲಿದ್ದ ಒಲವಿನಿಂದ ನಾನು ಗೆದ್ದಿದ್ದೇನೆ. ಅಲ್ಲದೆ, ಕಳೆದ ಬಾರಿಯ ಚುನಾವಣೆಯ ಸೋಲಿನ ಬಳಿಕ ನಿರಂತರವಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೇ ನನ್ನ ಗೆಲುವಿನ ಅಂಶಗಳು.

ಗೆಲುವಿನ ತಂತ್ರಗಾರಿಕೆಯ ಬಗ್ಗೆ ವಿವರಿಸುವಿರಾ?
2013ರಲ್ಲಿ ರೈ ಎದುರು ಸೋತ ಬಳಿಕ ನಾನು ಸುಮ್ಮನೆ ಕೂರಲಿಲ್ಲ. ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ದೆ. ಮತ್ತೆ ಪಕ್ಷ ಸಂಘಟನೆಗಾಗಿ 2018ರ ಜ.14ರಂದು ಎರಡನೇ ಬಾರಿ ‘ಪರಿವರ್ತನೆಗೆ ನಮ್ಮ ನಡಿಗೆ’ ಎಂಬ ಪಾದಯಾತ್ರೆಯನ್ನು ಮಾಡಿದ್ದೆ. ಅರಳ ಶ್ರೀಗರುಡ ಮಹಾಂಕಾಳಿ ದೇವಸ್ಥಾನದಿಂದ ಹೊರಟು 59 ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಿ ಕಾರ್ಯಕರ್ತರನ್ನು ಮತ್ತೆ ಹುರಿದುಂಬಿಸಿದ್ದೆ. ಇದರಿಂದ ಜನರ ನಾಡಿಮಿತವನ್ನು ಅರಿಯಲು ಸಾಧ್ಯವಾಯಿತು. ಇದರ ಜೊತೆ ಸಾಮಾಜಿಕ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದೇವೆ.

ಬಂಟ್ವಾಳ ಕೋಮು ಸೂಕ್ಷ್ಮ ಪ್ರದೇಶವೆಂಬ ಕುಖ್ಯಾತಿಯನ್ನು ಹೇಗೆ ದೂರ ಮಾಡುತ್ತೀರಿ?
ಕ್ಷೇತ್ರದ ಜನರು ಶಾಂತಿಪ್ರಿಯರು. ಸೌಹಾರ್ದವನ್ನು ಬಯಸುವವರು. ಆದರೆ ಇಲ್ಲಿನ ರಾಜಕೀಯ ಪಕ್ಷವೊಂದು ಅಧಿಕಾರಕೋಸ್ಕರ ಸಮಾಜದಲ್ಲಿ ಅಹಿತಕರ ಘಟನೆಗಳನ್ನು ನಡೆಸಿ ರಾಜಕೀಯ ಲಾಭ ಪಡೆಯುತ್ತಿದೆ. ಇತ್ತೀಚಿನ ಸನ್ನಿವೇಶಗಳನ್ನು ಗಮನಿಸುವುದಾದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಲ್ಲಲ್ಲಿ ಶಾಂತಿಯುತ ವಿಜಯೋತ್ಸವ ನಡೆದಿದೆ. ಯಾವುದೇ ಗಲಾಟೆ ಗದ್ದಲ ನಡೆದಿಲ್ಲ. ಆದರೆ, ಶನಿವಾರ ಬಿಜೆಪಿ ವಿಶ್ವಾಸಮತ ಸಾಬೀತು ಪಡಿಸದೇ ಅಧಿಕಾರ ಕಳೆದುಕೊಂಡು ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗುತ್ತಿದ್ದಂತೆಯೇ ಅಲ್ಲಲ್ಲಿ ಘರ್ಷಣೆಗಳು ನಡೆದಿವೆ. ಇದರಿಂದ, ಯಾರೂ ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿವೆ.

ಇವಿಎಂ ದೋಷದ ಬಗ್ಗೆ ಸಂಶಯ- ಆರೋಪಗಳು ಕೇಳಿಬರುತ್ತಿವೆಯಲ್ಲ?
ಸೋತ ಮೇಲೆ ಇಂತಹ ಆರೋಪಗಳು ಕೇಳಿಬರುತ್ತವೆ. ಕುಣಿಯಲು ಗೊತ್ತಿಲ್ಲದರಿಗೆ ರಂಗಸ್ಥಳ ಸರಿಯಿಲ್ಲ ಎಂಬ ಮಾತಿನಂತೆ. ಕಳೆದ ಬಾರಿ ನಾನು ಸೋತಿದ್ದೆ. ಆಗ ಇದೇ ಇವಿಎಂ ಇತ್ತಲ್ಲವೇ? ಆಗ ನಾನು ಆರೋಪ ಮಾಡಿಲ್ಲ. ಇದೀಗ ಎರಡೂ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿದೆ. ಇವಿಎಂನಲ್ಲಿ ದೋಷವಿದ್ದರೆ ಉಳ್ಳಾಲ ಕ್ಷೇತ್ರವೂ ಬಿಜೆಪಿ ಪಾಲಾಗುತ್ತಿತ್ತು. ಅದರ ಬಗ್ಗೆ ಯಾಕೆ ಅವರು ಮಾತನಾಡುವುದಿಲ್ಲ? ಅವರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಜಿಲ್ಲೆಯ ಜನರು ಬುದ್ಧಿವಂತರು. ಪರಿವರ್ತನೆಗಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯಲ್ಲಿ ನೀವು ಯಾವ ಅಂಶಗಳಿಗೆ ಹೆಚ್ಚು ಆದ್ಯತೆ ನೀಡುತ್ತೀರಿ?

ಮೊತ್ತ ಮೊದಲನೆಯದಾಗಿ ಒಳಚರಂಡಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಯಾಕೆಂದರೆ ಮೂಲಭೂತವಾಗಿ ಇರಬೇಕಾಗಿದ್ದ ಒಳಚರಂಡಿ ವ್ಯವಸ್ಥೆ ಬಂಟ್ವಾಳದಲ್ಲಿಲ್ಲ. ಇದರಿಂದ ನೇತ್ರಾವತಿ ನದಿಯು ಕೊಳಚೆ ನೀರು ಹಾಗೂ ಶೌಚಾಲಯದ ನೀರಿನಿಂದ ಮಲಿನವಾಗುತ್ತಿದೆ. ನದಿ ನೀರನ್ನು ಬಂಟ್ವಾಳ, ಮಂಗಳೂರಿನ ಜನರು ಕುಡಿಯುತ್ತಾರೆ. ಇದು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಒಳಚರಂಡಿ ನೀರು ನದಿಗೆ ಸೇರುತ್ತಿರುವುದು ನಾನು ಕಂಡ ಕೆಟ್ಟ ವ್ಯವಸ್ಥೆಯಾಗಿದೆ. ನಂತರ ಕ್ಷೇತ್ರದಲ್ಲಿ ಕಾನೂನು ಸುವವ್ಯಸ್ಥೆ ಕಾಪಾಡುವುದು, ರೈತರ ಅಭಿವೃದ್ಧಿ, ತಾಲೂಕಿನ ವಿವಿಧ ಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಮಾರ್ಪಾಡು, ವ್ಯಾಪಾರಸ್ಥರ ಅಭಿವೃದ್ಧಿ, ರಾಷ್ಟ್ರೀಯ ಭಾವೈಕ್ಯವನ್ನು ಬಿಂಬಿಸುವ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದು ಹಾಗೂ ಜನರ ಸಮಸ್ಯೆಗಳನ್ನು ಸ್ಪಂದಿಸಿ ಅದಕ್ಕೆ ಸೂಕ್ತ ಪರಹಾರ ಸಿಗುವಂತೆ ಮಾಡುವುದು.

ಅತಂತ್ರ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಹುದೇ?
ಎಲ್ಲ ಕ್ಷೇತ್ರದ ಜನರು ಬಯಸುವುದು ಅಭಿವೃದ್ಧಿಯೊಂದನ್ನೇ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ತೊಡಕು ಉಂಟಾಗದು. ಸರಕಾರ ಅತಂತ್ರವಾಗಿದ್ದರೂ, ಬಿಜೆಪಿ ದೊಡ್ಡ ಪಕ್ಷವಾಗಿ ಹಾಗೂ ಸಂಖ್ಯಾ ಬಲದಲ್ಲಿ 2.5ರಷ್ಟು ಮುನ್ನಡೆ ಸಾಧಿಸಿದೆ. ಮ್ಯಾಜಿಕ್ ನಂಬರ್ ಇಲ್ಲದಿದ್ದರೂ ರಾಜ್ಯದ ಜನರು ಕಾಂಗ್ರೆಸ್ ಅನ್ನು ವಿರೋಧಿಸಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
 
ಕ್ಷೇತ್ರದ ಮುಂದಿರುವ ಸವಾಲುಗಳನ್ನು ಹೇಗೆ ಎದುರಿಸುವಿರಿ?

ಕಳೆದ ಬಾರಿ ಸೋಲನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಈ ಬಾರಿ ನನಗೆ ಗೆಲುವಾಗಿದೆ. ಕ್ಷೇತ್ರದ ಮುಂದಿರುವ ಎಲ್ಲ ಸವಾಲುಗಳನ್ನು ನಿಭಾಯಿಸಲು ನಾನು ಸಮರ್ಥನಾಗಿದ್ದೇನೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ನನ್ನ ಶಾಸಕ ಸ್ಥಾನದ ಇತಿಮಿತಿಯೊಳಗೆ ಕ್ಷೇತ್ರದ ಜನರ ಕೆಲಸವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುತ್ತೇನೆ. ಕ್ಷೇತ್ರದಲ್ಲಿ ರಾಜಧರ್ಮವನ್ನು ಪಾಲಿಸುತ್ತೇನೆ. ಸಮಾಜದ ಸ್ವಾಸ್ಥವನ್ನು ಕಾಪಾಡಲು ಇಲ್ಲಿನ ಪೊಲೀಸರಿಗೆ ತನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಇಲ್ಲಿ ಯಾವುದೇ ಕೋಮುಗಲಭೆ ಅಥವಾ ಅಹಿತಕರ ಘಟನೆಗಳಿಗೆ ನಾನು ಅವಕಾಶ ಕೊಡುವುದಿಲ್ಲ. ಅಶಾಂತಿ ಉಂಟಾದರೆ ಅಭಿವೃದ್ಧಿ ಅಸಾಧ್ಯ. ಕ್ಷೇತ್ರದಲ್ಲಿ ಶಾಂತಿ ನೆಲೆನಿಂತರೆ ಅಭಿವೃದ್ಧಿ ಕಾಣಲು ಸಾಧ್ಯ. ಇದಕ್ಕಾಗಿ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಶಾಂತಿಯುವ ಬಂಟ್ವಾಳವೇ ನನ್ನ ಗುರಿ. ಕ್ಷೇತ್ರದ ಅಶಾಂತಿ ಉಂಟು ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಈ ಮೂಲಕ ಒತ್ತಾಯಿಸುತ್ತಿದ್ದೇನೆ.

ನಿಮ್ಮ ಕನಸಿನ ಬಂಟ್ವಾಳ ಹೇಗಿರಬೇಕು?
ಶಾಂತಿಯುತವಾದ ಬಂಟ್ವಾಳ, ಪರಸ್ಪರ ಒಬ್ಬರನ್ನೊಬ್ಬರು ನಂಬುವಂತಹ ಬಂಟ್ವಾಳವಾಗಬೇಕು. ತಾಲೂಕಿನ ಎಲ್ಲ ರೈತರ ಹಾಗೂ ಜನರ ಶ್ರೇಯಾಭಿವೃದ್ಧಿಯೇ ನನ್ನ ಕನಸು. ಕ್ಷೇತ್ರದ ಜನರು ಕೃಷಿಯಿಂದ ದೂರುವಾಗುತ್ತಿದ್ದಾರೆ. ಇದಕ್ಕಾಗಿ ಆಧುನಿಕವಾದ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮಾಡುತ್ತೇನೆ. ಒಳಚರಂಡಿ, ಆಟದ ಮೈದಾನ, ರಂಗಮಂದಿರ, ಕೈಗಾರಿಕೆ ಹಾಗೂ ಪ್ರವಾಸಿತಾಣಗಳ ಅಭಿವೃದ್ಧಿಯೂ ನನ್ನ ಕನಸು.

Writer - ಸಂದರ್ಶನ: ರಹಿಮಾನ್ ತಲಪಾಡಿ

contributor

Editor - ಸಂದರ್ಶನ: ರಹಿಮಾನ್ ತಲಪಾಡಿ

contributor

Similar News