ಕಮಲೇಶ್ಚಂದ್ರ ಸಮಿತಿ ವರದಿ ಅನುಷ್ಠಾನಕ್ಕೆ ಆಗ್ರಹ: ಗ್ರಾಮೀಣ ಅಂಚೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

Update: 2018-05-22 14:05 GMT

ಉಡುಪಿ, ಮೇ 22: ಕಮಲೇಶ್ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಫಾರಸುಗಳನ್ನು ಶೀಘ್ರವೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗವು ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದೆ.

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಬಸವ ಬಲ್ಲವ ಮಾತನಾಡಿ, ಕೇಂದ್ರ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಅನುಷ್ಠಾನಗೊಂಡು ವರ್ಷ ಕಳೆದರೂ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಡಾಕ್ ಸೇವಕರಿಗೆ ಇದುವರೆಗೆ ಅದರ ಪ್ರಯೋಜನ ದೊರೆತಿಲ್ಲ. 48 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಮತ್ತು ಅಷ್ಟೇ ಮೊತ್ತದ ಪಿಂಚಣಿದಾರರಿಗೆ ಆಯೋಗ ಶಿಫಾರಸುಗೊಂಡ ಎಂಟೇ ತಿಂಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

2.42 ಲಕ್ಷ ಗ್ರಾಮೀಣ ಡಾಕ್ ನೌಕರರ ವೇತನ ಪರಿಷ್ಕರಣೆಗಾಗಿ ಕೇಂದ್ರ ಸರಕಾರ 2015ರಲ್ಲಿ ಕಮಲೇಶ್ಚಂದ್ರ ನೇತೃತ್ವದ ಏಕಸದಸ್ಯ ಸಮಿತಿಯನ್ನು ನೇಮಿಸಿತು. ಈ ಸಮಿತಿಯು 2016ರಲ್ಲಿ ವರದಿಯನ್ನು ಇಲಾಖೆಗೆ ಸಲ್ಲಿಸಿತ್ತು. ಸಮಿತಿಯ ವರದಿ ಜಾರಿಗೊಳಿಸುವಂತೆ ಸಂಸದರಾದ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ದೂರಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘದ ಗ್ರೂಪ್ ಸಿ ವಿಭಾಗೀಯ ಕಾರ್ಯದರ್ಶಿ ಸುರೇಶ್ ಕೆ. ಮಾತನಾಡಿ, ಉತ್ತರ ಭಾರತ ಬೆರಳಣಿಕೆಯ ಸಂಸದರು ಬಿಟ್ಟರೆ ದಕ್ಷಿಣ ಭಾರತದ ಯಾವುದೇ ಸಂಸದ ಕೂಡ ನಮ್ಮ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ತಮ್ಮ ವೇತನ ಹೆಚ್ಚಳವನ್ನು ಕ್ಷಣ ಮಾತ್ರದಲ್ಲೇ ಅನುಷ್ಠಾನಗೊಳಿಸುವ ಸಂಸದರಲ್ಲಿ ಶೇ.20ರಷ್ಟು ಮಂದಿ ನಮ್ಮ ಬಗ್ಗೆ ಕಳಕಳಿ ಹೊಂದಿದ್ದರೆ.

201 ಅಂಚೆ ಕಚೇರಿ ಬಂದ್

ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿರುವ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ 201 ಗ್ರಾಮೀಣ ಅಂಚೆ ಕಚೇರಿ ಇಂದಿನಿಂದ ಬಂದ್ ಆಗಿದೆ. 201 ಅಂಚೆ ಕಚೇರಿಯಲ್ಲಿ ಒಟ್ಟು 525 ಗ್ರಾಮೀಣ ಅಂಚೆ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಬೇಡಿಕೆ ಈಡೇರಿಕೆ ಆಗುವವರಿಗೆ ಕೆಲಸಕ್ಕೆ ಹಾಜರಾಗದೆ ಧರಣಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಧರಣಿಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಕೆ.ಸಂತೋಷ್ ಮಧ್ಯಸ್ಥ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಅಶ್ವತ್ ಕುಮಾರ್, ಉಪ ಕಾರ್ಯದರ್ಶಿ ಬಿ.ಸುರೇಶ್ ಶೇರಿಗಾರ್, ಉಪಾಧ್ಯಕ್ಷ ಶಂಕರ್ ಶೆಟ್ಟಿ, ಸಹ ಕಾರ್ಯದರ್ಶಿ ಪ್ರವೀಣ್ ಜತ್ತನ್, ಅಖಿಲ ಭಾರತ ಅಂಚೆ ನೌಕರರ ಸಂಘದ ಪೋಸ್ಟ್‌ಮೆನ್ ಮತ್ತು ಎಂಟಿಎಸ್ ಘಟಕದ ರಾಜ್ಯಾಧ್ಯಕ್ಷ ವಿಜಯ ನಾರಿ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಪೋಸ್ಟ್‌ಮೆನ್ ಮತ್ತು ಎಂಟಿಎಸ್ ಘಟಕದ ಅಧ್ಯಕ್ಷ ವಾಸುದೇವ ತೊಟ್ಟಂ ಉಪಸ್ಥಿತರಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News